ಸಾರಾಂಶ
ನೀರಿನ ಘಟಕದ ಮೇಲೆ ಬಿದ್ದ ಬೃಹತ್ ಮರ
ಕನ್ನಡಪ್ರಭವಾರ್ತೆ ಕೊರಟಗೆರೆ
ಹೊಳವನಹಳ್ಳಿ ಗ್ರಾಮದಲ್ಲಿ ಅರಳಿ ಮರ ಬೀಳುವಂತಾಗಿದೆ ಎಂದು ಸಾರ್ವಜನಿಕರು ತಿಳಿಸಿದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶುದ್ದ ಕುಡಿಯುವ ನೀರಿನ ಘಟಕದ ಮೇಲೆ ಮರ ಉರುಳಿ ಬಿದ್ದಿದ್ದು ಘಟಕ ಸಂಪೂರ್ಣ ನಾಶವಾಗಿದ್ದು ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ. ತಾಲೂಕಿನ ಹೊಳವನಹಳ್ಳಿ ಗ್ರಾಮದ ಅಂಚೆ ಕಚೇರಿ ಸಮೀಪ ಇದ್ದ ಬೃಹತ್ ಅರಳಿ ಮರ ವಾಲಿದ ಕುರಿತು ಕನ್ನಡಪ್ರಭ ಭಾನುವಾರ ಸಚಿತ್ರ ವರದಿ ಪ್ರಕಟಿಸಿತ್ತು. ಈ ವೇಳೆ ಮಾತನಾಡಿದ್ದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಭಾನುವಾರವೂ ಯಾವುದೇ ಕ್ರಮಕ್ಕೆ ಮುಂದಾಗದೆ ಇದ್ದುದದರಿಂದ ಮೊದಲೇ ಬೇರುಗಳು ಮೇಲೆ ಬಂದಿದ್ದರಿಂದ ಮರ ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ಉರುಳಿ ಬಿದ್ದಿದೆ. ಇದರಿಂದಾಗಿ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಶುರುವಾಗಿದೆ. ಅಂಚೆ ಕಚೇರಿ ಹಾಗೂ ಕಂದಾಯ ಇಲಾಖೆಯ ಕಟ್ಟಡಗಳ ಮೇಲೆ ಮರದ ಕೊಂಬೆಗಳು ಬಿದ್ದು ಗೋಡೆಗಳು ಹಾನಿಯಾಗಿವೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ನಿರ್ಮಾಣ ಮಾಡಿದ್ದ ಶುದ್ದ ಕುಡಿಯುವ ನೀರಿನ ಘಟಕದ ಮೇಲೆ ಅರಳಿ ಮರ ಬಿದ್ದು ಅದರಲ್ಲಿ ಇದ್ದ ಉಪಕರಣಗಳು ನಾಶವಾಗಿವೆ. ಇದರಿಂದಾಗಿ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.ಗ್ರಾಮಸ್ಥ ನರಸಿಂಹಮೂರ್ತಿ ಮಾತನಾಡಿ ಅರಣ್ಯ ಇಲಾಖೆಗೆ ಶನಿವಾರ ಬೆಳಿಗ್ಗೆ ಕರೆ ಮಾಡಿ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಶನಿವಾರನೇ ಅರಳಿ ಮರವನ್ನ ತೆರವುಗೊಳಿಸಿದ್ದರೆ ಇವತ್ತು ನೀರಿನ ಘಟಕ ಹಾಗೂ ಸರ್ಕಾರಿ ಕಟ್ಟಡಗಳಿಗೆ ಯಾವುದೇ ಹಾನಿ ಆಗುತ್ತಿರಲಿಲ್ಲ. ಮರ ಬಿದ್ದ ನಂತರ ಬಂದು ಅದನ್ನ ತೆರವುಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.