ಸಾರಾಂಶ
ಕೆಸಿಸಿಐ ಸಂವಾದದಲ್ಲಿ ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರಿನ ಸಮಗ್ರ ಯೋಜನೆಗಳನ್ನೊಳಗೊಂಡ ಮಾಸ್ಟರ್ ಪ್ಲಾನ್ (ಮಹಾಯೋಜನೆ) ಶೀಘ್ರವೇ ಬಿಡುಗಡೆ ಮಾಡಲಾಗುವುದು, ಇದಕ್ಕೆ ನಾಗರಿಕರು ಯಾವುದೇ ತಿದ್ದುಪಡಿಗಳಿದ್ದರೆ ಸೂಚಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ-ಕೆಸಿಸಿಐ ವತಿಯಿಂದ ಚೇಂಬರ್ಸ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಗಳೂರನ್ನು ಒಂದು ಜಾಗತಿಕ ನಗರವನ್ನಾಗಿ ಮಾಡಬೇಕಿದೆ, ಇಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಇದುವರೆಗೆ ಅದರ ಸದ್ಬಳಕೆ ಆಗಿಲ್ಲ, ಪ್ರವಾಸೋದ್ಯಮ, ಮೂಲಸೌಕರ್ಯಗಳನ್ನು ಸುಧಾರಿಸಬೇಕಿದೆ. ಬೆಂಗಳೂರು ನಗರ ಈಗಾಗಲೇ ಕಾಸ್ಮೊಪಾಲಿಟನ್ ಆಗಿದೆ. ಅದೇ ರೀತಿ ಮಂಗಳೂರಿನ ವಿಶಿಷ್ಟ ಸಂಸ್ಕೃತಿ, ಆಹಾರ-ವಿಹಾರ, ಪರಂಪರೆ, ಜನಜೀವನ ಎಲ್ಲವೂ ಆಕರ್ಷಿಸುವಂತಿದೆ ಎಂದರು.ಟೆಕ್ನಾಲಜಿ ಪಾರ್ಕ್ ಶೀಘ್ರ ಅನುಷ್ಠಾನ: ಮಂಗಳೂರಿಗೆ ರಾಜ್ಯ ಸರ್ಕಾರ 135 ಕೋಟಿ ರು. ವೆಚ್ಚದಲ್ಲಿ ಟೆಕ್ನಾಲಜಿ ಪಾರ್ಕ್ ಮಂಜೂರು ಮಾಡಿದ್ದು, ಇದನ್ನು ಶೀಘ್ರ ಅನುಷ್ಠಾನಗೊಳಿಸಲಾಗುವುದು. ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ವಾಣಿಜ್ಯ ಹಬ್ ಆಗುವ ಪೂರ್ಣ ಸಾಮರ್ಥ್ಯ ಮಂಗಳೂರಿಗೆ ಇದೆ, ಅದನ್ನು ಈಗ ಹೂಡಿಕೆದಾರರು ಗುರುತಿಸಿದ್ದಾರೆ ಎಂದರು.
ಉದ್ಯಮಿ ಯತೀಶ್ ಬೈಕಂಪಾಡಿ ಮಾತನಾಡಿ, ಪದೇ ಪದೇ ಕರಾವಳಿ ಸಮುದ್ರಕೊರೆತಕ್ಕೆ ತುತ್ತಾಗುವುದರಿಂದ ಕೃತಕ ರೀಫ್ ನಿರ್ಮಾಣದಂತಹ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದರು.ಬೈಕಂಪಾಡಿಯಲ್ಲಿನ ಕೈಗಾರಿಕಾ ಪ್ರದೇಶದ ರಸ್ತೆಗಳ ಅಭಿವೃದ್ಧಿ ಕೈಗೊಳ್ಳುವಂತೆ ಉದ್ಯಮಿ ಅರುಣ್ ಪಡಿಯಾರ್ ಮತ್ತು ಬಿ.ಎ.ನಝೀರ್ ಗಮನ ಸೆಳೆದರು.
ಕೆನರಾ ಚೇಂಬರ್ಸ್ ಅಧ್ಯಕ್ಷ ಪಿ.ಬಿ.ಅಹಮ್ಮದ್ ಮುದಸ್ಸರ್ ಸ್ವಾಗತಿಸಿ, ಕೆಸಿಸಿಐ ಪರವಾಗಿ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು.ಉಪಾಧ್ಯಕ್ಷ ದಿವಾಕರ್ ಪೈ ಕೊಚ್ಚಿಕಾರ್, ಕಾರ್ಯದರ್ಶಿಗಳಾದ ಅಶ್ವಿನ್ ರೈ ಮಾರೂರು, ಜೀತನ್ ಅಲೆನ್ ಸಿಕ್ವೇರಾ ಇದ್ದರು. ಮೈತ್ರೇಯ ನಿರೂಪಿಸಿದರು.