ಸಾರಾಂಶ
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಜೊತೆ ಶಾಸಕ ಅಶೋಕ್ ರೈ ಸಭೆ
ಕನ್ನಡಪ್ರಭ ವಾರ್ತೆ ಪುತ್ತೂರುಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ೧೯ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿ ರು. ೬೦೯೦ ಲಕ್ಷದ ಮಾಸ್ಟರ್ ಪ್ಲಾನ್ ತಯಾರಿಸಲಾಗಿದ್ದು, ಈ ಕುರಿತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಶಾಸಕ ಅಶೋಕ್ ರೈ ಉಪಸ್ಥಿತಿಯಲ್ಲಿ ಬೆಂಗಳೂರು ವಿಧಾನ ಸೌಧದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಚೇರಿಯಲ್ಲಿ ಗುರುವಾರ ಸಭೆ ನಡೆಸಲಾಯಿತು. ವಿಷಯ ಪ್ರಸ್ತಾಪಿಸಿದ ಅಶೋಕ್ ಕುಮಾರ್ ರೈ, ದೇವಸ್ಥಾನದ ಜಾಗ ಅತಿಕ್ರಮಣ ಮಾಡಿ ನಿರ್ಮಾಣ ಮಾಡಾಗಿದ್ದ ಮನೆಗಳನ್ನು ತೆರವು ಮಾಡಲಾಗಿದೆ. ದೇವಳದ ಮುಂಭಾಗದಲ್ಲಿರುವ ಮಹಿಳಾ ಪೊಲೀಸ್ ಠಾಣೆ ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಈಗಾಗಲೇ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಹೊಸ ಠಾಣೆ ಪುತ್ತೂರಿನ ಬಸ್ ನಿಲ್ದಾಣದ ಸಮೀಪ ನಿರ್ಮಿಸಲು ಜಾಗ ಕಾಯ್ದಿರಿಸಲಾಗಿದೆ. ದೇವಳದ ಪಕ್ಕದ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ ಎಂದು ತಿಳಿಸಿದರು. ರು.೬೦೯೦ ಲಕ್ಷದ ಮಾಸ್ಟರ್ ಪ್ಲಾನ್:ದೇವಳದ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ. ಈ ಯೋಜನೆಯಂತೆ ೧೯ ಕಾಮಗಾರಿಗಳನ್ನು ಗುರುತಿಸಲಾಗಿದ್ದು, ಇದಕ್ಕೆ ರು. ೬೦೯೦ ಲಕ್ಷದ ಅವಶ್ಯಕತೆಯಿದೆ. ಈ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಮುಜರಾಯಿ ಖಾತೆಯ ಸಚಿವರ ಜೊತೆ ಶಾಸಕರು ಮಾತುಕತೆ ನಡೆಸಿದ್ದಾರೆ. ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಬೇಕಾದ ಅನುದಾನವನ್ನು ಒದಗಿಸುವ ಬಗ್ಗೆ ಸರ್ಕಾರ ಭರವಸೆ ನೀಡಿದೆ. ಈ ನಿಟ್ಟಿನಲ್ಲಿ ಕಾಮಗಾರಿಗೆ ಅನುದಾನ ಮತ್ತು ಮಾಸ್ಟರ್ ಪ್ಲಾನ್ ಬಗ್ಗೆ ಶಾಸಕರು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿದ್ದಾರೆ. ...........ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಈಗಾಗಲೇ ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ. ಅದರಂತೆ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್‌ಗೆ ಸಿದ್ಧತೆ ನಡೆಸಲಾಗಿದೆ. ಧಾರ್ಮಿಕ ದತ್ತಿ ಆಯುಕ್ತ ವೆಂಕಟೇಶ್ ಅವರೊಂದಿಗೆ ಮಾತುಕತೆ ನಡೆಸಿ ಎಲ್ಲಾ ಸಿದ್ದತೆ ನಡೆಸಲಾಗುತ್ತಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಯಾದಲ್ಲಿ ಇಲ್ಲಿಗೆ ಭಕ್ತಾದಿಗಳ ಮಹಾಪೂರವೇ ಹರಿದು ಬರಲಿದೆ.
-ಅಶೋಕ್ ಕುಮಾರ್ ರೈ, ಪುತ್ತೂರು ಶಾಸಕ.