ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಹಿರಿಯರನ್ನು ಗೌರವಿಸುವ, ಕಲಿಯುವ, ತಿಳಿಯುವ ಗುಣ ಮಕ್ಕಳಿಗೆ ಕಲಿಸಿ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರೊಂದಿಗೆ ಓದಲು ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಿಕೊಡಬೇಕು ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಮಂಗಳನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ನಗರದ ಹೊರವಲಯದಲ್ಲಿರುವ ಬಿ.ಜಿ.ಎಸ್.ಶಾಲೆಯಲ್ಲಿ ಸ್ವಸ್ತಿ ಮಾತಾ- ಪಿತೃ ವಂದನಾ ಕಾರ್ಯಕ್ರಮವನ್ನು ಸ್ವಾಮೀಜಿಯ ಮತ್ತು ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಾತಾ- ಪಿತೃ ವಂದನಾ ಕಾರ್ಯಕ್ರಮವು ಪೋಷಕರಿಗೆ ಗೌರವ, ಪ್ರೀತಿ ಮತ್ತು ಕೃತಜ್ಞತೆ ಸಲ್ಲಿಸುವ ಒಂದು ಭಾವನಾತ್ಮಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಪೋಷಕರ ಪಾದ ಪೂಜೆ, ತಿಲಕಧಾರಣೆ, ಪುಷ್ಪಾರ್ಪಣೆ ಮತ್ತು ಆಶೀರ್ವಾದ ಪಡೆಯುವ ಮೂಲಕ, ''''ಮಾತೃ ದೇವೋ ಭವ, ಪಿತೃ ದೇವೋ ಭವ'''' ಮೌಲ್ಯಗಳನ್ನುಎತ್ತಿಹಿಡಿಯುತ್ತಾರೆ. ಇದು ಪೋಷಕ- ಮಕ್ಕಳ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದರು.ಮನೆಯಲ್ಲೇ ಕಲಿಕೆ ಹೆಚ್ಚು:
ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಮುಂತಾದ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಬಾಲ್ಯದಲ್ಲಿ ಕಲಿತದ್ದು ಕಟ್ಟಡಕ್ಕೆ ಅಡಿಪಾಯದಂತೆ ಜೀವನದಲ್ಲಿ ಭವಿಷ್ಯಕ್ಕೆ ನೆರವಾಗುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ಮೌಲ್ಯಗಳನ್ನು ಕಲಿಸಬೇಕು. ಮನೆಯಲ್ಲಿ ಟಿವಿ ಮತ್ತು ಮೊಬೈಲ್ ಗಳು ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿರಲಿ. ಅವರು ದಾರಿತಪ್ಪುವಷ್ಟು ಅದನ್ನು ನೋಡದಿರಲಿ ಎಂದು ತಿಳಿಹೇಳಿದರು.
ನಾವು ತಂದೆ- ತಾಯಿಗೆ ಪೂಜ್ಯ ಸ್ಥಾನ ನೀಡಿದ್ದೇವೆ. ಅವರೇ ನಮ್ಮ ಮಾರ್ಗದರ್ಶಕರು. ಹಾಗೆಯೇ ಪೋಷಕರು ಸಹ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಹನೆ ಕಲಿಸಬೇಕು. ವೃದ್ಧಾಪ್ಯದಲ್ಲಿ ಮಕ್ಕಳು ತಂದೆ- ತಾಯಿಯರನ್ನು ಪ್ರೀತಿಯಿಂದ ನೋಡಿ, ಅವರ ಬದುಕಿಗೆ ಆಸರೆಯಾಗಬೇಕು. ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಪೋಷಕರಿಗೆ ಪಾದಪೂಜೆ ನೆರವೇರಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ನಮ್ಮ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿಕ್ಷಣ ಸಂಸ್ಥೆಗಳ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಈ ಅದೃಷ್ಟ ದೊರೆತಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇದೊಂದು ಜೀವನದ ತಿರುವಿನ ಅಂಶವಾಗಿದೆ ಎಂದರು.
ನಮ್ಮ ಸಂಸ್ಥೆಯು ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದೆ, ಅದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಪರೀಕ್ಷಾ ಸಮಯದಲ್ಲೂ ಪೋಷಕರ ಕರ್ತವ್ಯದ ಬಗ್ಗೆ ತಿಳಿಸಿದರು.
ಮಕ್ಕಳು ಸಂಸ್ಕಾರವಂತರಾಗಿ ಪೋಷಕರ ಆಸೆ ನೆರವೇರಿಸಬೇಕು. 10ನೇ ತರಗತಿಯ ನಂತರದ ಎರಡು ವರ್ಷಗಳು ಬಹಳ ಮುಖ್ಯ. ತಂದೆ- ತಾಯಂದಿರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಮಕ್ಕಳು ತಂದೆ- ತಾಯಂದಿರಿಗೆ ಒಳ್ಳೆಯ ಹೆಸರು ತರಬೇಕು, ಸಮಾಜದಲ್ಲಿ ಅವರು ತಲೆತಗ್ಗಿಸುವ ಕೆಲಸ ಎಂದೂ ಮಾಡಬಾರದು. ನೀವು ಯಾವ ಮಟ್ಟಕ್ಕೆ ಬೆಳೆಯಬೇಕೆಂದರೆ ಮುಂದಿನ ದಿನಗಳಲ್ಲಿ ಕನಿಷ್ಠ 2 ಮಕ್ಕಳಿಗೆ ನೀವು ವಿದ್ಯಾದಾನ ಮಾಡುವ ಮಟ್ಟಕ್ಕೆ ಬೆಳೆಯಬೇಕಿದೆ. ಎಲ್ಲರೂ ಚೆನ್ನಾಗಿ ಓದಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.ಪ್ರಾಂಶುಪಾಲರಾದ ಎಂ.ವಿ.ಚಿಕ್ಕಜ್ಜಪ್ಪ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ನಮ್ಮ ಸಂಸ್ಥೆಯಲ್ಲಿ ಸ್ವಸ್ತಿ ಮಾತಾ- ಪಿತೃ ವಂದನಾ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇನ್ನು ಕೇವಲ 20 ದಿನಗಳಲ್ಲಿ ಪ್ರಾರಂಭವಾಗುವ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕೆಂಬುದು ಎಲ್ಲಾ ಪೋಷಕರ ಆಸೆಯಾಗಿದೆ ಎಂದರು.
ವಿದ್ಯಾರ್ಥಿಗಳು ಸಾಮೂಹಿಕವಾಗಿ ತಮ್ಮ ತಂದೆ- ತಾಯಿಗಳ ಪಾದಗಳನ್ನು ತೊಳೆದು ಅರಿಶಿನ- ಕುಂಕುಮ ಹಚ್ಚಿ, ಪುಷ್ಪಾರ್ಚನೆ ಮಾಡಿ ಪಾದ ಪೂಜೆ ಮಾಡಿದರು.ಈ ಮೂಲಕ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಓದಿದ ಶಾಲೆಗೆ ಕೀರ್ತಿ, ಗುರುಗಳಿಗೆ ಗೌರವ. ತಂದೆ- ತಾಯಿಯ ಕನಸ್ಸನ್ನು ನನಸು ಮಾಡುತ್ತೇವೆಂದು ಸಂಕಲ್ಪ ತೊಟ್ಟರು.
ಈ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಮಂಜೇಶ್ ರೆಡ್ಡಿ, ಎಲ್.ಪಾಂಡುರಂಗ, ಸಹಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.