ಸಾರಾಂಶ
ಸಂಡೂರು: ತಾಲೂಕಿನ ಸುಶೀಲಾನಗರ ಗ್ರಾಮದಲ್ಲಿ ಬುಧವಾರ ಜಿಪಂ ಬಳ್ಳಾರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಬಳ್ಳಾರಿ ವಿಭಾಗ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆಯಾದ ಸುರಭಿ ಸಂಸ್ಥೆಗಳ ಸಹಯೋಗದಲ್ಲಿ ಜಲ ಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯ ಕುರಿತು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಗ್ರಾಪಂ ಅಧ್ಯಕ್ಷೆ ರಾಮೀಬಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನೀರು ಅತ್ಯಮೂಲ್ಯವಾದ ನೈಸರ್ಗಿಕ ಸಂಪತ್ತು. ನೀರನ್ನು ಹಿತಮಿತವಾಗಿ ಬಳಸಬೇಕು ಮತ್ತು ಮುಂದಿನ ಪೀಳಿಗೆಗೂ ಇದನ್ನು ಉಳಿಸಬೇಕು. ಈ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.ಜಿಪಂ ಐಎಸ್‌ಆರ್‌ಎ ತಂಡದ ನಾಯಕ ಕೊಟ್ರೇಶ್ ಎದುರುಮನೆ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ೨೦೨೪ರ ಒಳಗಾಗಿ ಪ್ರತಿ ಮನೆಗೂ ಕಾರ್ಯಾತ್ಮಕ ನಳ ಮತ್ತು ಮೀಟರ್ ಅಳವಡಿಸಿ, ಶುದ್ಧ ಮತ್ತು ಸುರಕ್ಷಿತ ನೀರನ್ನು ಕೊಡಲಾಗುತ್ತದೆ. ಪ್ರತಿಯೊಬ್ಬರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.
ಐಎಸ್‌ಎ ಸಮುದಾಯ ಸಂಘಟಕರಾದ ಎಚ್. ಮಂಜುಳಾ ಮಾತನಾಡಿ, ನಾವು ಆರೋಗ್ಯವಂತರಾಗಬೇಕಾದರೆ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಹರಿಸಬೇಕು. ಪ್ರತಿಯೊಬ್ಬರು ಸರ್ಕಾರದಿಂದ ಉಚಿತವಾಗಿ ಸಿಗುವಂತಹ ಶೌಚಾಲಯ ಹಾಗೂ ಇಂಗು ಗುಂಡಿಯನ್ನು ನಿರ್ಮಿಸಿಕೊಂಡು ಬಳಸಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕಸದ ಗಾಡಿಗೆ ಕೊಟ್ಟು ಸ್ವಚ್ಛತೆ ಕಾಪಾಡಬೇಕು. ಮಳೆ ನೀರು ಕೊಯ್ಲು ಮಾಡಿಕೊಂಡು ಪುನರ್ಬಳಕೆ ಮಾಡಬೇಕು ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಈ. ಸುಜಾತಮ್ಮ, ಸದಸ್ಯರಾದ ಶಿವಮೂರ್ತಿ ನಾಯಕ್, ಪಿ.ಎಸ್. ಬಾಬು ನಾಯಕ್, ಲಕ್ಷ್ಮಿ ಶಾರದಾ ಬಾಯಿ, ಪಿಡಿಒ ಬಿ.ಪ್ರಭುವನಗೌಡ, ಕಾಶಾನಾಯಕ್, ಪಿ. ಜ್ಯೋತಿ, ಗ್ರಾಮದ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ, ಷಣ್ಮುಖಪ್ಪ, ಎನ್‌ಆರ್‌ಎಲ್‌ಎಂ ಸಂಘದ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.