ಜಿಲ್ಲೆಯಲ್ಲಿ ತಾಯಿ ಮರಣ ಸಂಖ್ಯೆ ಇಳಿಮುಖ: ಡಾ.ನಂಜುಂಡಯ್ಯ

| Published : Jan 22 2025, 12:31 AM IST

ಸಾರಾಂಶ

ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಡಿಕೇರಿ ಜಿಲ್ಲಾ ಆಸ್ಪತ್ರೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ಹಾಗೂ ಆಯುಷ್ಮಾನ್ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನೆರವೇರಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಕೊಡಗು ಜಿಲ್ಲೆಯಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯರು, ತಜ್ಞ ವೈದ್ಯರ ಕೊರತೆ ನಡುವೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಪ್ರಾಮಾಣಿಕ ಸೇವೆಯ ಫಲದಿಂದ ಜಿಲ್ಲೆಯಲ್ಲಿ ಇಂದು ತಾಯಿ ಮರಣ ಸಂಖ್ಯೆ ಕಡಿಮೆಯಾಗಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರ್ಜನ್ ಡಾ.ನಂಜುಂಡಯ್ಯ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಡಿಕೇರಿ ಜಿಲ್ಲಾ ಆಸ್ಪತ್ರೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ಹಾಗೂ ಆಯುಷ್ಮಾನ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರ ಮತ್ತು ಆರೋಗ್ಯ ಇಲಾಖೆ ಕಳೆದ 18 ತಿಂಗಳಿಂದ ಪ್ರತಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುತ್ತಿದೆ. ಶಿಬಿರದಲ್ಲಿ ವಿವಿಧ ಖಾಯಿಲೆಗಳಿಗೆ ಸಂಬಂಧ ಪಟ್ಟ ತಜ್ಞ ವೈದ್ಯರನ್ನು ಕರೆಸಿಕೊಂಡು ರೋಗಿಗಳನ್ನು ತಪಾಸಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಿಂದ ರೋಗಿಗಳು ದೂರದ ಆಸ್ಪತ್ರೆಗಳಿಗೆ ಹೋಗುವುದು ತಪ್ಪುತ್ತದೆ ಎಂದರು.

ಸಾಹಿತಿ, ಪತ್ರಕರ್ತೆ ಶ.ಗ.ನಯನತಾರ ಪ್ರಕಾಶ್ಚಂದ್ರ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಢತೆ ಇರಬೇಕಾಗುತ್ತದೆ ಈ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಆರೋಗ್ಯ ಶಿಬಿರ ನಡೆಸುತ್ತಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗುತ್ತಿದೆ ಎಂದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ್, ದಂತ ವೈದ್ಯ ಡಾ.ನಿತಿನ್, ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಮುಂತಾದವರಿದ್ದರು.

ವಿವಿಧ ತಜ್ಞ ವೈದ್ಯರಾದ ಡಾ.ರಾಜಶ್ರೀ, ಡಾ.ಅಜೀರ್, ಡಾ.ಸಚಿನ್, ಡಾ.ಸಿದ್ದಿಕ್, ಡಾ.ಶ್ವೇತಾ, ಡಾ.ರಮೇಶ್, ಡಾ.ಸಿದ್ದನ್, ಡಾ.ಅಕಾಂಕ್ಷಾ, ಡಾ.ಸಂಜನಾ, ಆರ್.ವಿಕ್ರಮ್, ದಿವ್ಯಶ್ರೀ ರೋಗಿಗಳಿಗೆ ತಪಾಸಣೆ ನಡೆಸಿದರು.