ಮಾತೃಮಂಡಳಿ ಅನೇಕರ ಬದುಕಿಗೆ ಬೆಳಕಾಗಿದೆ: ಶಾಸಕ ಕೆ.ಹರೀಶ್‌ಗೌಡ

| Published : Aug 10 2025, 01:30 AM IST

ಸಾರಾಂಶ

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ಮಹಿಳೆಯರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು, ದೊಡ್ಡ ಗುರಿಯೊಂದಿಗೆ ಮಹಿಳೆಯರೇ ಸ್ಥಾಪಿಸಿದ್ದು ಶ್ಲಾಘನೀಯ. ಮೈಸೂರಿನ ಯಶೋದರಾ ದಸಪ್ಪ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮದ್ಯಪಾನ ರದ್ದುಪಡಿಸಬೇಕು ಎಂದು ಹೋರಾಟ ಮಾಡಿದ್ದರು. ಅಂತಹ ಇತಿಹಾಸ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಹಿಳಾ ಸಬಲೀಕರಣಕ್ಕಾಗಿ, ಮಹಿಳೆಯರು ಸಮಾಜದ ಮುಂಚೂಣಿಯಲ್ಲಿ ಇರಬೇಕು ಎಂಬ ಕಾರಣಕ್ಕಾಗಿ ಕಟ್ಟಿದ ಮಾತೃ ಮಂಡಳಿ ಸಂಸ್ಥೆಯು ಅನೇಕರ ಬದುಕಿಗೆ ಬೆಳಕಾಗಿದೆ ಎಂದು ಶಾಸಕ ಕೆ. ಹರೀಶ್‌ಗೌಡ ಹೇಳಿದರು.

ನಗರದ ವಿವಿ ಮೊಹಲ್ಲಾದ ಮಾತೃ ಮಂಡಳಿ ಸಂಸ್ಥೆಯ 90ರ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಸಂಸ್ಥಾಪಕರ ಭಾವಚಿತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ಮಹಿಳೆಯರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು, ದೊಡ್ಡ ಗುರಿಯೊಂದಿಗೆ ಮಹಿಳೆಯರೇ ಸ್ಥಾಪಿಸಿದ್ದು ಶ್ಲಾಘನೀಯ. ಮೈಸೂರಿನ ಯಶೋದರಾ ದಸಪ್ಪ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮದ್ಯಪಾನ ರದ್ದುಪಡಿಸಬೇಕು ಎಂದು ಹೋರಾಟ ಮಾಡಿದ್ದರು. ಅಂತಹ ಇತಿಹಾಸ ಇದೆ ಎಂದು ಅವರು ಸ್ಮರಿಸಿದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಆರಂಭವಾದ ಮಹಾರಾಣಿ ಕಾಲೇಜಿನ ಕಾಯಕಲ್ಪಕ್ಕೆ ನಾನು ಮುಂದಾದೆ. ಶಾಸಕನಾಗಿ ಮೊದಲ ಬಾರಿಗೆ ಆಯ್ಕೆ ಆದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ನಾನು ಇಟ್ಟಿದ್ದ ಮೊದಲ ಬೇಡಿಕೆ ಮಹಾರಾಣಿ ಕಾಲೇಜಿನ ಅಭಿವೃದ್ಧಿ. ಕಾಲೇಜಿನಲ್ಲಿ 17,000 ವಿದ್ಯಾರ್ಥಿಗಳು ಓದುತ್ತಿದ್ದರೂ, ಹಾಸ್ಟೆಲ್ ವ್ಯವಸ್ಥೆ ಬರಿ 300 ಜನಕ್ಕೆ ಮಾತ್ರ ಸಿಗುತ್ತಿತ್ತು. ಈ ವಿಷಯ ಹೇಳಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಜೆಟ್ ನಲ್ಲಿ ವಿದ್ಯಾರ್ಥಿನಿಲಯಕ್ಕೆ 20 ಕೋಟಿ ರೂ. ಅನುದಾನ ನೀಡಿದ್ದರಿಂದ 1,900 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆಗೆ ಕಾಮಗಾರಿ ಆರಂಭಗೊಂಡಿದೆ ಎಂದರು.

ಮಾತೃ ಮಂಡಳಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿನಿಯರು ಇಂದು ವಿವಿಧ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗಗಳನ್ನು ಮಾಡುತ್ತಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಮಾತನಾಡಿ, 90 ವರ್ಷಗಳ ಹಿಂದೆ ಹೆಣ್ಣು ಮಕ್ಕಳೇ ಸೇರಿ ಮಾತೃ ಮಂಡಳಿ ಸಂಸ್ಥೆಯನ್ನು ಸ್ಥಾಪಿಸಿರುವುದು ಹೆಗ್ಗಳಿಕೆ. ಈ ಸಂಸ್ಥೆಯ ಮುಖ್ಯ ಉದ್ದೇಶ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಬೇಕು, ಹೆಣ್ಣು ಮಕ್ಕಳನ್ನು ಮುಖ್ಯ ವಾಹಿನಿಗೆ ತರಬೇಕು ಎಂಬುದೇ ದೊಡ್ಡ ಗುರಿ ಎನಿಸುತ್ತದೆ ಎಂದರು.

90 ವರ್ಷದ ಹಿಂದೆಯೇ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬ ಯೋಚನೆ ಬಂದಿದ್ದನ್ನು ಗಮನಿಸಬೇಕು. ಮೈಸೂರು ಎಂದಾಕ್ಷಣ ಮಲ್ಲಿಗೆ, ಮೈಸೂರು ಪಾಕ್ ಎಷ್ಟು ಖ್ಯಾತಿಯೋ ಹಾಗೆಯೇ ಮಂಡಳಿಯ ವಿದ್ಯಾರ್ಥಿಗಳು ಅಷ್ಟೇ ಖ್ಯಾತರಾಗಿದ್ದಾರೆ ಎಂದರು.

ಕವಯಿತ್ರಿ ಡಾ. ಧರಣೀದೇವಿ ಮಾಲಗತ್ತಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಸಂಸ್ಥೆ ಗೌರವಾಧ್ಯಕ್ಷೆ ವಿಜಯಲಕ್ಷ್ಮೀ ಅರಸ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಾಮೇಶ್ವರಿ ವರ್ಮ, ಕಾರ್ಯದರ್ಶಿ ವಾಣಿ ಪ್ರಸಾದ್, ಸಹ ಕಾರ್ಯದರ್ಶಿ ಹೇಮಾ ಬಾಲಚಂದ್ರನ್‌, ಕೋಶಾಧಿಕಾರಿ ವಿಜಯಲಕ್ಷ್ಮೀ ಮುರಳೀಧರ್‌ ಇದ್ದರು.