ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಅಭಿವೃದ್ಧಿ ಮತ್ತು ಕುಟುಂಬ ನಿರ್ವಹಣೆಗೆ ಮತ್ಸ್ಯ ಸಂಜೀವಿನಿ ಯೋಜನೆ ಸಹಕಾರಿಯಾಗಲಿದೆ ಎಂದು ತಾಪಂ ಇಒ ಸತೀಶ್ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಸಂಜೀವಿನಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಗ್ರಾಮ ಪಂಚಾಯ್ತಿಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮತ್ಸ್ಯ ಸಂಜೀವಿನಿ ಯೋಜನೆಯಡಿ ಆಯ್ಕೆಯಾಗಿರುವ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಗ್ರಾಪಂ ವ್ಯಾಪ್ತಿಯ ಕೆರೆಗಳಲ್ಲಿ ಮೀನು ಸಾಕಾಣಿಕೆ ಮತ್ತು ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರ ಹಲವಾರು ಬಗೆಯ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದರ ಜೊತೆಗೆ ಮತ್ತೊಂದು ಹೊಸ ಪ್ರಯತ್ನವಾಗಿ ಮತ್ಸ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳಾ ಒಕ್ಕೂಟಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ ಎಂದರು.ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಕಾಳಿಂಗನಹಳ್ಳಿ, ತುಪ್ಪದಮಡು, ದೇವರಮಲ್ಲನಾಯ್ಕನಹಳ್ಳಿ, ಭೀಮನಹಳ್ಳಿ ಹಾಗೂ ದೊಡ್ಡಬಾಲ ಗ್ರಾಪಂ ವ್ಯಾಪ್ತಿಗೆ ಬರುವ ೫ ಕೆರೆಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಜೀವಿನಿ ಒಕ್ಕೂಟದ ಮಹಿಳಾ ಸ್ವಸಹಾಯ ಗುಂಪುಗಳಿಗೆ ೩ ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಕೊಡಲಾಗುವುದು. ಉತ್ತಮ ತಳಿಯ ಮೀನುಗಳನ್ನು ಸಾಕಾಣಿಕೆ ಮಾಡಿ ಮೀನು ಮಾರಾಟ ಮಾಡುವ ಮೂಲಕ ಅರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ಮಾತನಾಡಿ, ಸ್ವ ಸಹಾಯ ಗುಂಪುಗಳ ಮಹಿಳಾ ಸದಸ್ಯರನ್ನು ಮೀನುಗಾರಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವ ಸಲುವಾಗಿ ಮತ್ಸ್ಯ ಸಂಜೀವಿನಿ ಯೋಜನೆಯನ್ನು ರೂಪಿಸಲಾಗಿದೆ. ಮೀನು ಸಾಕಾಣಿಕೆಯಿಂದ ಅಧಿಕ ಲಾಭ ಮತ್ತು ಹೆಚ್ಚು ಅನುಕೂಲವಾಗುತ್ತದೆ. ಹಾಗಾಗಿ ಮಹಿಳಾ ಸ್ವ ಸಹಾಯ ಗುಂಪುಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್, ಸಿಡಿಪಿಓ ಕೃಷ್ಣಮೂರ್ತಿ, ತಾಪಂ ಸಹಾಯಕ ನಿರ್ದೇಶಕ ಸಿ.ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಕ ಸಿದ್ದಲಿಂಗಸ್ವಾಮಿ ಸೇರಿದಂತೆ ಸಂಜೀವಿನಿ ಒಕ್ಕೂಟದ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))