ಭಾಷಾ ಕಲಿಕೆಯಿಂದ ಪ್ರಬುದ್ಧತೆ ಬೆಳೆಯಲಿದೆ: ಡಾ.ಎಸ್.ಎಂ. ಗಾಂವಕರ

| Published : Nov 22 2025, 03:15 AM IST

ಭಾಷಾ ಕಲಿಕೆಯಿಂದ ಪ್ರಬುದ್ಧತೆ ಬೆಳೆಯಲಿದೆ: ಡಾ.ಎಸ್.ಎಂ. ಗಾಂವಕರ
Share this Article
  • FB
  • TW
  • Linkdin
  • Email

ಸಾರಾಂಶ

ಭಾಷಾ ಕಲಿಕೆಯಿಂದ ಪ್ರಬುದ್ಧತೆ ಬೆಳೆಯುತ್ತದೆ. ಕನ್ನಡ ಭಾವೈಕ್ಯತೆಯ ಸೇತುವೆ. ಮಾತೃಭಾಷೆಯಾದ ಕನ್ನಡ ವ್ಯಾಪಾರ-ವ್ಯವಹಾರಗಳನ್ನೂ ಸಾಗಿಸುವ ಅನ್ನದ ಭಾಷೆಯಾಗಿದೆ ಎಂದು ಆಡಳಿತ ಮಂಡಳಿ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎಂ. ಗಾಂವಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾಷಾ ಕಲಿಕೆಯಿಂದ ಪ್ರಬುದ್ಧತೆ ಬೆಳೆಯುತ್ತದೆ. ಕನ್ನಡ ಭಾವೈಕ್ಯತೆಯ ಸೇತುವೆ. ಮಾತೃಭಾಷೆಯಾದ ಕನ್ನಡ ವ್ಯಾಪಾರ-ವ್ಯವಹಾರಗಳನ್ನೂ ಸಾಗಿಸುವ ಅನ್ನದ ಭಾಷೆಯಾಗಿದೆ ಎಂದು ಆಡಳಿತ ಮಂಡಳಿ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎಂ. ಗಾಂವಕರ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಕನ್ನಡ ಸಂಘ, ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡ ಹಬ್ಬದಲ್ಲಿ ಕನ್ನಡ ಧ್ವಜ ಅನಾವರಣಗೊಳಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯ ಬಗ್ಗೆ ಕಾಳಜಿ ಮೂಡಿಸುವುದು, ನಾಡು-ನುಡಿಯ ಸಂಸ್ಕೃತಿಕ ಸಾಮರ್ಥ್ಯ ವೃದ್ಧಿಸುವುದು ಹಾಗೂ ನಡೆ-ನುಡಿಗಳ ಸಾಂಪ್ರದಾಯಿಕ ಪರಂಪರೆ ಬಗ್ಗೆ ಜಾಗೃತಿ ಮೂಡಿಸುವುದು ಕನ್ನಡ ಹಬ್ಬದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಧ್ಯಕ್ಷ ಗುರುಬಸವ ಸೂಳಿಬಾವಿ ಚಾಲನೆ ನೀಡಿದರು. ಮಹಾವಿದ್ಯಾಲಯ ಆವರಣವನ್ನು ಬಣ್ಣ ಬಣ್ಣದ ರಂಗೋಲಿ, ಕನ್ನಡ ಬಾವುಟ ಹಾಗೂ ತಳಿರು ತೋರಣಗಳಿಂದ ಸಿಂಗಾರಿಸಿದ್ದು, ಹಬ್ಬದ ವಾತಾವರಣ ಮನೆ ಮಾಡಿತ್ತು.ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಸಂಯೋಜಕಿ ಜಿ.ಎಂ. ನಾವದಗಿ, ಕನ್ನಡ ಸಂಘದ ಕಾರ್ಯಧ್ಯಕ್ಷ ಡಾ.ಎಂ. ನಂಜುಂಡಸ್ವಾಮಿ, ಕಾರ್ಯದರ್ಶಿ ಡಾ. ಬಸವರಾಜ ಖೋತ ಸೇರಿದಂತೆ ಕನ್ನಡ ಸಂಘದ ಪದಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಡಾ.ಎಂ.ಎಂ. ಹುದ್ದಾರ ಕಾರ್ಯಕ್ರಮ ನಡೆಸಿಕೊಟ್ಟರು.

ಇಳಕಲ್ ಸೀರೆ ತೊಟ್ಟ ವಿದ್ಯಾರ್ಥಿನಿಯರ ಸೊಬಗು, ವಿದ್ಯಾರ್ಥಿಗಳ ದೇಸಿ ಉಡುಗೆ ಜತೆಗೆ ಜಾನಪದ ಹಾಡಿಗೆ ಹೆಜ್ಜೆ ಹಾಕಿದ್ದು ಕಾರ್ಯಕ್ರಮಕ್ಕೆ ಕಳೆ ತಂದವು. ದೇಸಿ ಉಡುಗೆ ತೊಡೆಗೆಯ ನಡಿಗೆ ಎಲ್ಲರ ಗಮನ ಸೆಳೆಯಿತು.