ಸಾರಾಂಶ
ಬಸವರಾಜ ಹಿರೇಮಠ ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ತಾಲೂಕಿನ ಕುನ್ನೂರು ಗ್ರಾಮದ ಹೊರವಲಯದಲ್ಲಿ ಇರುವ ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ ಶಿಕ್ಷಕರಿಂದ ಆರಂಭಗೊಂಡು ಮುಖ್ಯೋಪಾಧ್ಯಾಯರ ವರೆಗೆ ಪ್ರಭಾರಿಗಳದ್ದೇ ಕಾರುಬಾರು ಎನ್ನುವಂತಾಗಿದೆ.ಶಾಲೆಯಲ್ಲಿ 6ನೇ ವರ್ಗದಿಂದ 10 ತರಗತಿವರೆಗೆ 287 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 10 ಗುಂಟೆ ಜಾಗೆಯಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿದ್ದು, 5 ತರಗತಿ ಕೊಠಡಿ, ಒಂದು ಕಾರ್ಯಾಲಯವಿದೆ.
ಮುಖ್ಯ ಶಿಕ್ಷಕರನ್ನು ಒಳಗೊಂಡು 8 ಶಿಕ್ಷಕರು ಇದ್ದಾರೆ. 7 ಜನ ಅತಿಥಿ ಶಿಕ್ಷಕರೇ ಇದ್ದಾರೆ. ಇವರಲ್ಲಿ ಹಿಂದಿ ಶಿಕ್ಷಕಿ ಮೂರು ದಿನ ಇರುತ್ತಾರೆ. ಉಳಿದ ದಿನ ಅವರು ಬೇರೆ ಕಡೆ ಕಾರ್ಯನಿರ್ವಹಿಸುತ್ತಾರೆ. ಮುಖ್ಯೋಪಾಧ್ಯಾಯರು ವಾರದಲ್ಲಿ ಮೂರು ದಿನ ಮಾತ್ರ ಇದ್ದು, ಉಳಿದ ದಿನ ಬೇರೆಡೆ ಪೂರ್ಣ ಪ್ರಮಾಣಧಲ್ಲಿ ಕಾರ್ಯ ನಿರ್ವಹಿಸುತ್ತಾರೆ.ಮರೀಚಿಕೆಯಾದ ಸೌಲಭ್ಯ: ವಿದ್ಯಾರ್ಥಿನಿಯರಿಗೆ 2 ಶೌಚಾಲಯ, 3 ಮೂತ್ರಾಲಯ ಇದ್ದರೂ ಸುವ್ಯವಸ್ಥಿತವಾಗಿಲ್ಲ. ವಿದ್ಯಾರ್ಥಿಗಳಿಗೆ ಶೌಚಾಲಯ, ಮೂತ್ರಾಲಯ ಇದ್ದರೂ ಅವು ಸಾಮಗ್ರಿ ಶೇಖರಣಾ ಕೊಠಡಿಯಾಗಿವೆ. ಎರಡು ಸಿಸಿ ಕ್ಯಾಮೆರಾ ಇದ್ದರೂ ಅವು ದುರಸ್ತಿಗೆ ಬಂದು ತಿಂಗಳು ಗತಿಸಿದೆ. ಶುದ್ಧ ಕುಡಿಯುವ ನೀರಿನ ಆರ್ ಓ ಇದೆ. ಆದರೆ ಇದು ಕೂಡಾ ಕೆಟ್ಟು ಹೋಗಿದ್ದು, ಹೀಗಾಗಿ ವಿದ್ಯಾರ್ಥಿಗಳು ಅಶುದ್ಧ ನೀರನ್ನೇ ಕುಡಿಯಬೇಕಾಗಿದೆ. ಶಾಲೆಗೆ ಕಾಂಪೌಂಡ್ ಇಲ್ಲ.
ಇಲ್ಲಿಯ ಅವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಾಲಕರು ಸರ್ಕಾರ ಕೊಡ ಮಾಡುವ ಕೋಟ್ಯಂತರ ಅನುದಾನ ವಿದ್ಯಾರ್ಥಿಗಳು, ಶಾಲೆಗೆ ಅನುಕೂಲವಾಗಲಿ ಎಂದು ಆಗ್ರಹಿಸುತ್ತಾರೆ.ಈ ಶಾಲೆಯಲ್ಲಿ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರನ್ನು ಕಾಯಂ ನಿಯೋಜಿಸಬೇಕು. ಅಲ್ಲದೆ ದೈಹಿಕ ಶಿಕ್ಷಕ, ಜವಾನ, ಕಂಪ್ಯೂಟರ್ ಆಪರೇಟರ್ ಹುದ್ದೆ ನಿಯೋಜನೆ ಮಾಡಬೇಕು. ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಆಗಬೇಕು ಕುನ್ನೂರು ಗ್ರಾಪಂ ಸದಸ್ಯ ಡಿ.ಆರ್. ಬೊಮ್ಮನಹಳ್ಳಿ ಹೇಳಿದರು.
ಶಾಲೆ ಅವ್ಯವಸ್ಥೆ ಸರಿಪಡಿಸುವುದರ ಜೊತೆಗೆ ಉತ್ತಮ ಶಿಕ್ಷಣ ನೀಡಲು ಮುಂದಾಗುತ್ತೇವೆ. ಬೇಡಿಕೆಗಳ ಕುರಿತಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಪ್ರಭಾರಿ ಶಿಕ್ಷಕ ಸಿ.ಬಿ. ನಾಗಪ್ಪ ಹೇಳಿದರು.ಕುನ್ನೂರ ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ ಅವ್ಯವಸ್ಥೆಯನ್ನು ತಕ್ಷಣ ಸರಿಪಡಿಸಲಾಗುವುದು. ಶಾಲೆ ನಡೆಸಲು ಹೆಚ್ಚಿನ ಕ್ಲಾಸ್ ಕೂಡಾ ಹಾಕಿದರೂ ಬೆಳಗಿನ ೮-೩೦ ಹಾಗೂ ಸಂಜೆ ೬ ಗಂಟೆಯೊಳಗೆ ಬಿಡುವ ವ್ಯವಸ್ಥೆಯನ್ನು ಮಾಡಲಾಗುವದು ಎಂದು ಜಿಲ್ಲಾ ಅಲ್ಪಸಂಖ್ಯಾತ ಇಲಾಖಾ ಅಧಿಕಾರಿ ಅಶೋಕ ಗದ್ದಿಗೌಡ್ರ ಹೇಳಿದರು.