ಸಾರಾಂಶ
ಬ್ಯಾಡಗಿ: ಮೌನಾನುಷ್ಠಾನ ಎಂಬುದು ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳುವುದಾಗಿದೆ. ಇಂತಹದ್ದೊಂದು ಸಿದ್ಧಿಯಿಂದ ದೇವರನ್ನು ಹತ್ತಿರಕ್ಕೆ ಬರಮಾಡಿಕೊಳ್ಳುವ ಬಹುದೊಡ್ಡ ಸಂಕಲ್ಪದಲ್ಲಿ ನೆಗಳೂರು ಹಿರೇಮಠದ ಗುರು ಶಾಂತೇಶ್ವರ ಶಿವಾಚಾರ್ಯಶ್ರೀಗಳು ಯಶಸ್ವಿಯಾಗಿದ್ಧಾರೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮೋಟೆಬೆನ್ನೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶ್ವಶಾಂತಿ ಹಾಗೂ ಪ್ರದೇಶಾಭಿವೃದ್ಧಿಗೆ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಶ್ರೀಗಳ 1 ತಿಂಗಳ ಮೌನಅನುಷ್ಠಾನ ಮಂಗಲೋತ್ಸವ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜ್ಞಾನವು ದೇವರನ್ನು ಸ್ತುತಿಸುವುದಕ್ಕೋಸಕರ ಬಳಸುವ ಏಕೈಕ ಮಾರ್ಗವಾಗಿದೆ. ಆದರೆ, ಲೌಕಿಕ ಜಗತ್ತಿನಲ್ಲಿ ಉತ್ಸುಕನಾದ ಮನುಷ್ಯ ತನ್ನನ್ನು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಅದೇ ವ್ಯಕ್ತಿಯು ಭಕ್ತಿಯ ಮಾರ್ಗ ಹಿಡಿದಲ್ಲಿ ಆತನ ಆತ್ಮಶುದ್ಧಿಯಾಗಲಿದ್ದು ಇದರಿಂದ ಆತನ ಪ್ರಾಪಂಚಿಕ ಬದುಕಿನಲ್ಲಿ ಬಹಳಷ್ಟು ಬದಲಾವಣೆ ತರಲಿದೆ ಎಂದರು.
ಮನುಷ್ಯ ತಾನು ಬೆಳೆಯುತ್ತಿರುವಾಗ ದೇವರ ಬಗ್ಗೆ ಸಂಪೂರ್ಣ ಅರ್ಥಮಾಡಿಕೊಳ್ಳದೇ ಆತನ ಮೇಲೆ ನಂಬಿಕೆ ಇಡಬೇಕೆ ಬೇಡವೇ ಎಂಬ ಪ್ರಶ್ನೆಯನ್ನು ಮನದಲ್ಲಿ ಮೂಡಿಸಿಕೊಳ್ಳುತ್ತಾನೆ. ಆದರೆ ಅದೇ ವ್ಯಕ್ತಿಗೆ ಸಂಕಷ್ಟ ಎದುರಾದಾಗ ತಕ್ಷಣವೇ ದೇವರೊಂದಿಗೆ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಾನೆ, ಇದು ಆಧ್ಯಾತ್ಮಕ್ಕೆ ವಿರೋಧವಾಗಿದ್ದು ದೇವರ ಕುರಿತು ಧ್ಯಾನಕ್ಕೆ ದಿನದ ಒಂದು ಭಾಗವನ್ನು ಮೀಸಲಿಟ್ಟಲ್ಲಿ ಮಾತ್ರ ಆತನನ್ನು ಒಲಿಸಿಕೊಳ್ಳಲು ಸಾಧ್ಯವೆಂದರು.ಶಿವಾಚಾರ್ಯ ಪರಂಪರೆ ಸಮಾಜದ ಒಳಿತಿಗಾಗಿ ಸಾವಿರಾರು ವರ್ಷದಿಂದ ತನ್ನ ಆಚಾರ ವಿಚಾರಗಳನ್ನು ತಿಳಿಸುತ್ತಾ ಬಂದಿದೆ. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯಶ್ರೀಗಳ 1 ತಿಂಗಳ ಮೌನ ಅನುಷ್ಠಾನ ಪವಿತ್ರ ಬೋಧನೆಗಳಡಿಯಲ್ಲಿ ಇಂದು ಲೋಕಕಲ್ಯಾಣಕ್ಕಾಗಿ ಪೂಜಿಸುವಂತಹ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಅತಿಥಿಗಳಾಗಿದ್ದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಇನ್ನಿತರ ಧರ್ಮಗಳಿಗೆ ಭಾರತ ಜನ್ಮಸ್ಥಳವಾಗಿದೆ, ಹಿಂದೂ ಧರ್ಮ ಪ್ರಪಂಚದ ಅತ್ಯಂತ ಪುರಾತನ ಧರ್ಮವಾಗಿದ್ದು, ಹೇಗಾದರೂ ಮಾಡಿ ಹಿಂದೂ ಧರ್ಮವನ್ನು ಭಾರತದಲ್ಲಿ ಪ್ರಮುಖ ಧರ್ಮವಾಗಿ ಇರಿಸಿಕೊಳ್ಳಲು ಸಾಮೂಹಿಕವಾಗಿ ಪ್ರಯತ್ನಿ ಸಬೇಕಾಗಿದೆ ಎಂದರು.ಯುವರಾಜ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಅಮ್ಮಿನಭಾವಿ ಹಿರೇಮಠದ ಅಭಿನವ ಶಾಂತಲಿಂಗ ಶ್ರೀ, ನವಲೆ ಹಿರೇಮಠದ ಅಭಿನವ ಶಿವಲಿಂಗ ಶ್ರೀ, ಹಾವನೂರು ದಳವಾಯಿಮಠದ ಶಿವಕುಮಾರಶ್ರೀ, ಗ್ರಾಪಂ.ಅಧ್ಯಕ್ಷೆ ಪಾರ್ವತಿ ನಾಯಕ, ಉಪಾಧ್ಯಕ್ಷೆ ಮೀನಾಕ್ಷಿ ಅಂಗಡಿ, ಮುಖಂಡರಾದ ವಿ.ವಿ. ಹಿರೇಮಠ, ಬಿ.ಸಿ. ಹಾವೇರಿಮಠ, ಚನ್ನವೀರಪ್ಪ ಬಳ್ಳಾರಿ, ನಿವೃತ್ತ ಉಪನ್ಯಾಸಕ ಡಾ. ಪ್ರೇಮಾನಂದ ಲಕ್ಕಣ್ಣವರ, ಷಣ್ಮುಖಪ್ಪ ಬಳ್ಳಾರಿ, ನಾಗರಾಜ ಬಳ್ಳಾರಿ, ಶಿವಬಸಪ್ಪ ಕುಳೇನೂರ, ರೈತ ಸಂಘದ ಪ್ರಧಾನ ಕಾರ‍್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ವಿಜಯಭರತ ಬಳ್ಳಾರಿ, ನಾಗರಾಜ ಆನ್ವೇರಿ, ಶಿವಾನಂದ ಬೆನ್ನೂರ, ಮಾನೆ ಕ್ಯಾನಕೋರ ಪ್ರೈ.ಲಿ.ವ್ಯವಸ್ಥಾಪಕ ಎಂ.ಕಿಶನಕುಮಾರ ಉಪಸ್ಥಿತರಿದ್ದರು.