ಮಾವುತ, ಕಾವಾಡಿಗೂ ಗೊತ್ತಾಗದಂತೆ ಹೆತ್ತ ಆನೆ

| Published : Oct 25 2023, 01:15 AM IST

ಮಾವುತ, ಕಾವಾಡಿಗೂ ಗೊತ್ತಾಗದಂತೆ ಹೆತ್ತ ಆನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೆಗ್ನೆನ್ಸಿ ಟೆಸ್ಟ್‌ ಕೂಡ ನಡೆದಿತ್ತು. ಆದರಲ್ಲಿ ನೇತ್ರಾವತಿ ಗರ್ಭಿಣಿ ಅಲ್ಲ ಎಂದೇ ವೈದ್ಯರು ವರದಿ ಕೊಟ್ಟಿದ್ದರು
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗ ದಸರಾ ಮೆರವಣಿಗೆ ಹಿನ್ನೆಲೆ ಆಗಮಿಸಿದ್ದ ನೇತ್ರಾವತಿ ಆನೆ ದಿಢೀರ್‌ ಮರಿ ಹಾಕಿರುವುದು ಎಲ್ಲರಿಗೂ ಅಚ್ಚರಿ ತಂದಿದೆ. ಕೆಲ ತಿಂಗಳ ಹಿಂದಷ್ಟೇ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಆನೆಗಳ ತಲಾಷ್‌ ನಡೆಯುತ್ತಿತ್ತು. ಆಗ ಸಕ್ರೆಬೈಲು ಬಿಡಾರದ ಆನೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದರು. ಈ ಹಿನ್ನೆಲೆ ಬಿಡಾರದ ಆನೆಗಳ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಆಗ ಪ್ರೆಗ್ನೆನ್ಸಿ ಟೆಸ್ಟ್‌ ಕೂಡ ನಡೆದಿತ್ತು. ಆದರಲ್ಲಿ ನೇತ್ರಾವತಿ ಗರ್ಭಿಣಿ ಅಲ್ಲ ಎಂದೇ ವೈದ್ಯರು ವರದಿ ಕೊಟ್ಟಿದ್ದರು. ಆನೆಯ ಪ್ರೆಗ್ನೆನ್ಸಿ ರಿಪೋರ್ಟ್ ನೆಗೆಟಿವ್ ಬಂತು ಅಂದ ಮೇಲೆ ಅದು ಹೇಗೆ ಮರಿ ಹಾಕಲು ಸಾಧ್ಯ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಸಾಮಾನ್ಯವಾಗಿ ಆನೆಗಳು ಮರಿಹಾಕುವ ಎರಡು ಮೂರು ದಿನದ ಹಿಂದೆಯೇ ಅವುಗಳ ಹೊಟ್ಟೆಯಲ್ಲಿ ಮರಿ ಉರುಳಾಡುವುದು ಗೊತ್ತಾಗುತ್ತದೆ. ಹೊಟ್ಟೆಯ ಭಾಗದಲ್ಲಿ ಆಗುವ ಬದಲಾವಣೆಗಳು ಸಹಜವಾಗಿ ಮಾವುತ, ಕಾವಾಡಿಗೆ ಗೊತ್ತಾಗುತ್ತದೆ. ಆದರೆ, ನಾಲ್ಕು ದಿನಗಳಿಂದ ತಾಲೀಮಿನಲ್ಲಿ ಪಾಲ್ಗೊಂಡಿದ್ದ ನೇತ್ರಾವತಿ ಆನೆ ಇಂತಹ ಸಹಜ ಕುರುಹುಗಳನ್ನು ನೀಡದೇ ಏಕಾಏಕಿ ಸೋಮವಾರ ರಾತ್ರಿ ಹೆಣ್ಣುಮರಿಗೆ ಜನ್ಮ ನೀಡಿದೆ. - - - ಬಾಕ್ಸ್‌ ಪ್ರೆಗ್ನೆನ್ಸಿ ರಿಪೋರ್ಟ್‌ ನೆಗೆಟೀವ್‌ ಬಗ್ಗೆ ಪರಿಶೀಲನೆ: ಡಿಸಿಎಫ್‌ ಹೇಳಿಕೆ ಗರ್ಭವತಿಯಾದ ಆನೆಯ ಹೊಟ್ಟೆ ದಪ್ಪದಾಗಿರುತ್ತದೆ. ಆದರೆ, ನೇತ್ರಾವತಿ ಆನೆಯಲ್ಲಿ ಗರ್ಭವತಿ ಆಗಿರುವ ಬಗ್ಗೆ ಯಾವ ಸಣ್ಣ ಬದಲಾವಣೆಯೂ ಕಂಡಿರಲಿಲ್ಲ. ಸಾಮಾನ್ಯವಾಗಿ ಆನೆಗಳು ಗರ್ಭವತಿಯಾದ 22 ತಿಂಗಳ ಬಳಿಕ ಮರಿಯನ್ನು ಹಾಕುತ್ತವೆ. ಆದರೆ, ಈ ಮರಿಗೆ 17 ತಿಂಗಳಷ್ಟೇ ತುಂಬಿದೆ. ನೇತ್ರಾವತಿ ಆನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹೀಗಾಗಿ ಅದು ಗರ್ಭಿಣಿ ಎಂದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ವರದಿಯಲ್ಲಿ ಹೇಗೆ ನೆಗೆಟಿವ್‌ ಬಂದಿದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಡಿಸಿಎಫ್‌ ಪ್ರಸನ್ನ ಪಟಗಾರ್‌ ತಿಳಿಸಿದ್ದಾರೆ.