ಮಾರ್ಚ್‌ ಅಂತ್ಯದೊಳಗೆ ಗರಿಷ್ಠ ನಿವೇಶನ ಹಂಚಿಕೆ: ಸಚಿವ ಕೆ.ಎಚ್. ಮುನಿಯಪ್ಪ

| Published : Feb 20 2025, 12:45 AM IST

ಸಾರಾಂಶ

ಬೇಸಿಗೆ ಆರಂಭವಾಗುತ್ತಿದ್ದು, ಜಿಲ್ಲಾಡಳಿತ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ನೀಡಬೇಕು ಮತ್ತು ಜಾನುವಾರುಗಳಿಗೆ ಬೇಸಿಗೆಯಲ್ಲಿ ಬಾಧಿಸುವ ರೋಗಗಳನ್ನು ಸರಿಯಾಗಿ ಉಪಚರಿಸಬೇಕೆಂದು ಆಹಾರ ನಾಗರಿಕ ಸರಬರಾಜು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಬೇಸಿಗೆ ಆರಂಭವಾಗುತ್ತಿದ್ದು, ಜಿಲ್ಲಾಡಳಿತ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ನೀಡಬೇಕು ಮತ್ತು ಜಾನುವಾರುಗಳಿಗೆ ಬೇಸಿಗೆಯಲ್ಲಿ ಬಾಧಿಸುವ ರೋಗಗಳನ್ನು ಸರಿಯಾಗಿ ಉಪಚರಿಸಬೇಕೆಂದು ಆಹಾರ ನಾಗರಿಕ ಸರಬರಾಜು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆಯಾಗಿದ್ದು, ಈ ಸಂಬಂಧ ಅಧಿಕಾರಿಗಳು ಸಭೆ ನಡೆಸಬೇಕು. ಹಣದ ಕೊರತೆಯಿಲ್ಲ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದ್ದು, ಬಳಸಿಕೊಳ್ಳಿ ಎಂದು ತಿಳಿಸಿದರು.

ಪೋಡಿ ಅಭಿಯಾನದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲೂ ಪ್ರಥಮ ಸ್ಥಾನ ಕಾಯ್ದುಕೊಳ್ಳುವುದರೊಂದಿಗೆ ರಾಜ್ಯದ ಮೊದಲ ಪೋಡಿಮುಕ್ತ ಜಿಲ್ಲೆಯಾಗುವಂತೆ ನೋಡಿಕೊಳ್ಳಬೇಕೆಂದರು. ಗ್ರಾಮೀಣ ರಸ್ತೆಗಳು, ರೈತರ ಜಮೀನುಗಳಿಗೆ ರಸ್ತೆ, ಸ್ಮಶಾನದ ರಸ್ತೆಗಳ ಒದಗಿಸುವ ಸಂಬಂಧ ವಾರದಲ್ಲಿ ಒಂದು ದಿನ ಅಥವಾ ಒಂದು ಮಧ್ಯಾಹ್ನ ಈ ಬಗೆಗೆ ಅಧಿಕಾರಿಗಳ ಸಭೆಯಾಗಬೇಕು ಎಂದರು.

ಜಿಲ್ಲೆಯ ಹಲವು ಕೆರೆಗಳಲ್ಲಿ ಮಳೆಯಿಲ್ಲದ ಕಾರಣ ಗಿಡ- ಗೆಂಟೆಗಳು ಬೆಳೆದಿದ್ದು, ಅವುಗಳ ತೆರವುಗೊಳಿಸಬೇಕು, ಹೂಳು ತುಂಬಿರುವ ಕೆರೆಗಳ ಹೂಳು ತೆಗೆಯುವ ಕಾರ್ಯವಾಗಬೇಕು ಎಂದು ತಿಳಿಸಿದರು.

ನಿವೇಶನ ರಹಿತರಿಗೆ ನಿವೇಶನ:

ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಿವೇಶನ ರಹಿತರಿಗೆ ಮಾರ್ಚ್ ಅಂತ್ಯದೊಳಗಾಗಿ ಗರಿಷ್ಠ ಪ್ರಮಾಣದ ನಿವೇಶನಗಳನ್ನು ಹಂಚಿಕೆ ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ 20 ಸಾವಿರದಷ್ಟು ವಸತಿ ರಹಿತರು ನಿವೇಶನಗಳಿಗೆ ಅರ್ಜಿ ಸಲ್ಲಿಸಿದ್ದು, ಆದ್ಯತೆಯ ಮೇರೆಗೆ ನಿವೇಶನ ಹಂಚಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಸಿಇಒ ಕೆ.ಅನುರಾಧ, ಎಡಿಸಿ ಎಚ್.ಅಮರೇಶ್, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

-------