ಸಾರಾಂಶ
ಹಾನಗಲ್ಲ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ರೋಶನಿ ಸಮಾಜಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಉದ್ಘಾಟಿಸಿದರು.
ಹಾನಗಲ್ಲ: ಹಿರಿಯರನ್ನು ಗೌರವಿಸಿ ಕೌಟುಂಬಿಕ ವಾತ್ಸಲ್ಯ ನೀಡುವ ಅಗತ್ಯವನ್ನು ಅಲ್ಲಗಳೆಯದೇ ಎಲ್ಲ ಕುಟುಂಬಗಳು ಸಾಮರಸ್ಯದ ಮನೆಗಳಾಗಬೇಕು ಎಂದು ರೋಶನಿ ಸಮಾಜಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಹನುಮಾಪುರ ಗ್ರಾಮದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ವೈವಿಧ್ಯತೆಯಲ್ಲಿ ಏಕತೆಯುಳ್ಳ ರಾಷ್ಟ್ರ. ಇಲ್ಲಿ ಹತ್ತು ಹಲವು ಸಾಂಸ್ಕೃತಿಕ ಆಚರಣೆ, ಸಾಮಾಜಿಕ ವೈವಿಧ್ಯತೆಗಳಿವೆ. ಅದರೆ ವೈವಿಧ್ಯತೆಯಲ್ಲಿಯೂ ಒಟ್ಟಾಗಿ ಬಾಳುವ ನಿಷ್ಠೆ ಈ ದೇಶದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಹಿರಿಯರನ್ನು ಗೌರವಿಸುವ ಪರಿಪಾಠ ಕಡಿಮೆಯಾಗುತ್ತಿದೆ ಎಂಬ ಆರೋಪಗಳಿವೆ. ಹಿರಿಯರು ನಮ್ಮ ದೇವರಂತೆ, ಅವರನ್ನು ಗೌರವಿಸುವ ಹಾಗೂ ಅವರ ಆರೋಗ್ಯ ಆಗು-ಹೋಗುಗಳಿಗೆ ಸ್ಪಂದಿಸುವ ಅಗತ್ಯವಿದೆ. ಅವರ ಅಭಿಪ್ರಾಯಗಳಿಗೂ ಮನ್ನಣೆ ಸಿಗುವಂತಾಗಬೇಕು. ಹಿರಿಯರ ಸಮಸ್ಯೆಗಳಿಗೂ ಸ್ಪಂದಿಸಬೇಕು. ಪುಸ್ತಕಗಳಿಗಿಂತ ಮಿಗಿಲಾದ ಅನುಭವ ಹಿರಿಯರಿಂದ ಪಡೆಯಲು ಸಾಧ್ಯವಿದೆ. ರೋಶನಿ ಸಮಾಜ ಸೇವಾ ಸಂಸ್ಥೆ ಕೂಡ ಹಿರಿಯ ನಾಗರಿಕರ ಸಹಾಯಕ್ಕೆ ಬದ್ಧವಾಗಿದೆ ಎಂದರು.ಹಿರಿಯ ನಾಗರಿಕ ಯಲ್ಲಪ್ಪ ಶೃಂಗೇರಿ ಮಾತನಾಡಿ, ಮಕ್ಕಳು ಅಜ್ಜ, ಅಜ್ಜಿಯರೊಂದಿಗೆ ಇರಲು ಹೆಚ್ಚು ಇಷ್ಟಪಡುತ್ತವೆ. ಆದರೆ ಈಗ ಯೂಟ್ಯೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಅನುಭವಗಳಿಗೆ ಬಹುತೇಕ ಮಕ್ಕಳ ಆಕರ್ಷಿತರಾಗುತ್ತಿದ್ದಾರೆ. ಇದು ಅಪಾಯಕಾರಿಯಾದುದು. ಇದರಿಂದ ಮಕ್ಕಳು ಬಾಲ್ಯದಲ್ಲಿಯೇ ಹಲವು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮನೋವೈಕಲ್ಯಗಳೂ ಕಂಡುಬರುತ್ತಿವೆ. ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಆರೋಗ್ಯ, ಮನಸ್ಸನ್ನು ಚೆನ್ನಾಗಿಟ್ಟುಕೊಳ್ಳಲು ಸಾಧ್ಯ. ಅಂತಹ ಪರಿಪಾಠ ಮತ್ತೆ ಆರಂಭವಾಗಬೇಕು. ಹಿರಿಯರಿಗೂ ಚಿಕ್ಕ ಮಕ್ಕಳೆಂದರೆ ಬಹು ಪ್ರೀತಿ. ಅಂತಹ ವಾತಾವರಣವನ್ನು ಕುಟುಂಬಗಳು ನೀಡಬೇಕು ಎಂದರು.
ಆದರ್ಶ ತಾಲೂಕು ಮಹಿಳಾ ಒಕ್ಕೂಟದ ಸದಸ್ಯೆ ಸುಜಾತಾ ಕರೆಗಿಡ್ಡನವರ, ಮಹಿಳಾ ಸ್ವಸಹಾಯ ಸಂಘದ ಹಿರಿಯರಾದ ಶಾಂತವ್ವ ದೊಡ್ಮನಿ, ಅಂಗನವಾಡಿ ಕಾರ್ಯಕರ್ತೆ ಸುನೀತಾ ಶೇಷಗಿರಿ, ಕಾರ್ಯಕ್ರಮಗಳ ವ್ಯವಸ್ಥಾಪಕ ಶಿವಕುಮಾರ ಮಾಂಗ್ಲೇನವರ, ಮಹಿಳಾ ಸಬಲೀಕರಣದ ಸಂಯೋಜಕ ಡಿಗ್ಗಪ್ಪ ಲಮಾಣಿ, ಸುಮಂಗಲಾ ಬಡಿಗೇರ ಇದ್ದರು.;Resize=(128,128))
;Resize=(128,128))