ಪ್ರತಿಯೊಂದು ಸರ್ಕಾರಿ, ಅನುದಾನಿತ ಶಾಲೆಗಳ ಹಳೇ ವಿದ್ಯಾರ್ಥಿಗಳು ನೀ ಕಲಿತ ಶಾಲೆ ತಿರುಗಿ ನೋಡು ಎಂಬ ಶೀರ್ಷಿಕೆ ಅಡಿಯಲ್ಲಿ ಆಯಾ ಶಾಲೆಗಳ ಹಳೇ ವಿದ್ಯಾರ್ಥಿಗಳ ಸಂಘವನ್ನು ರಚಿಸಿಕೊಂಡು ಶಾಲೆಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಿಕೊಡುವ ಕಾರ್ಯ ಮಾಡಬೇಕು.
ಧಾರವಾಡ:
ಪ್ರತಿಯೊಂದು ಸರ್ಕಾರಿ, ಅನುದಾನಿತ ಶಾಲೆಗಳ ಹಳೇ ವಿದ್ಯಾರ್ಥಿಗಳು ನೀ ಕಲಿತ ಶಾಲೆ ತಿರುಗಿ ನೋಡು ಎಂಬ ಶೀರ್ಷಿಕೆ ಅಡಿಯಲ್ಲಿ ಆಯಾ ಶಾಲೆಗಳ ಹಳೇ ವಿದ್ಯಾರ್ಥಿಗಳ ಸಂಘವನ್ನು ರಚಿಸಿಕೊಂಡು ಶಾಲೆಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಿಕೊಡುವ ಕಾರ್ಯ ಮಾಡಬೇಕೆಂದು ಶಾಲಾ ಶಿಕ್ಷಣ ಇಲಾಖೆ ಉಪಸಮನ್ವಯ ಅಧಿಕಾರಿ ಎಸ್.ಎಂ. ಹುಡೇದಮನಿ ಸಲಹೆ ನೀಡಿದರು.ಇಲ್ಲಿಯ ಸಾಧನಕೇರಿ ವಿದ್ಯಾಭಿೃದ್ಧಿ ಸಮಿತಿಯ ಹಿರಿಯ ಪ್ರಾಥಮಿಕ, ಪ್ರೌಢಶಾಲೆಯ 1990-2000ನೇ ಬ್ಯಾಚ್ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಹಾಗೂ ಶಾಲಾ ನಾಮಫಲಕ ಉದ್ಘಾಟನೆ ನರೆವೇರಿಸಿದ ಅವರು, ಆಯಾ ಶಾಲೆಗಳ ಹಳೇ ವಿದ್ಯಾರ್ಥಿಗಳು ಪ್ರತಿಯೊಬ್ಬರು ಒಂದಿಲ್ಲೊಂದು ಉದ್ಯೋಗದಲ್ಲಿರುತ್ತಾರೆ ಅಥವಾ ಉನ್ನತ ಹುದ್ದೆಗಳಲ್ಲೂ ಇರಬಹುದು. ಒಬ್ಬರಿಗೊಬ್ಬರು ಸಂಪರ್ಕ ಕಲ್ಪಿಸಿಕೊಂಡು ಹಳೇ ವಿದ್ಯಾರ್ಥಿಗಳ ಸಂಘ ರಚಿಸಿಕೊಂಡು ತಮ್ಮ ಶಾಲೆಗಳ ಅಭಿವೃದ್ಧಿಗೆ ಹೆಗಲು ನೀಡಬೇಕು. ಈ ನಿಟ್ಟಿನಲ್ಲಿ ಸಾಧನಕೇರಿ ಶಾಲೆಯ ಹಳೇ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು.
ಗೌರವ ಉಪಸ್ಥಿತಿ ವಹಿಸಿದ್ದ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಎಚ್.ವಿ. ಡಂಬಳ ಹಾಗೂ ಹಾಲಿ ಕಾರ್ಯಾಧ್ಯಕ್ಷ ಎಸ್.ವಿ. ಡಂಬಳ ಮಾತನಾಡಿ, ಹಳೇ ವಿದ್ಯಾರ್ಥಿಗಳು ಬರೀ ಗುರುವಂದನೆ ಮಾಡಿ ನಂತರ ಶಾಲೆಯ ನಂಟು ಕಳೆದುಕೊಳ್ಳದೇ ಪ್ರತಿ ವರ್ಷ ಸ್ನೇಹ ಸಮ್ಮಿಲನದ ಮೂಲಕ ಮತ್ತೆ ಮತ್ತೆ ಭೇಟಿಯಾಗಬೇಕು. ಶಾಲೆಯ ಆಗು-ಹೋಗುಗಳ ಜತೆಗೆ ತಮ್ಮ ಬಾಲ್ಯದ ಸ್ನೇಹವನ್ನು ಸಹ ಈ ಮೂಲಕ ಮುಂದುವರಿಸಬೇಕೆಂಬ ಸಲಹೆ ನೀಡಿದರು.ಸಾಧನಕೇರಿ ಶಾಲೆಯಲ್ಲಿ 1990-2000ರ ವರೆಗೆ 1ರಿಂದ 10ನೇ ತರಗತಿ ವರೆಗೆ ಕಲಿತ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಾದ ಎಸ್.ಜಿ. ಜೋಶಿ, ಎಸ್.ಟಿ. ಜೋಶಿ, ಎಸ್.ಡಿ. ಪವಾರ, ಆರ್.ಎಂ. ನಿಲುಗಲ್, ವಿ.ಎಚ್. ಕುಸುಗಲ್, ಸುನೀಲ ಡೆವಿಡ್, ಗುರುರಾಜ ದೇಶಪಾಂಡೆ, ಕೃಷ್ಣಾ ಕುಲಕರ್ಣಿ, ಗಿರೀಶ ನರೇಂದ್ರ, ಎನ್.ಇ. ಕುಲಕರ್ಣಿ ಹಾಗೂ ಜಿ.ಎ. ಎಲಿಗಾರ ಅವರನ್ನು ಆತ್ಮೀಯವಾಗಿ ಗೌರವಿಸಿದರು. ಜತೆಗೆ 30 ವರ್ಷಗಳ ನಂತರ ಭೇಟಿಯಾದ ತಮ್ಮ ಗುರುಗಳು ಹಾಗೂ ಸ್ನೇಹಿತರೊಂದಿಗೆ ಸಂವಾದವೂ ಜರುಗಿತು. ಪ್ರಸ್ತುತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಂ.ಜಿ. ಕೊಡ್ಲಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಸ್. ನಾಗರಾಳ ಮಾತನಾಡಿದರು. ವಿಜಯಕುಮಾರ ಮಾನೆ ಸ್ವಾಗತಿಸಿದರು. ಬಸವರಾಜ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಕವಿತಾ ಬೋರಗಾಂವಕರ ನಿರೂಪಿಸಿದರು. ಮಾಲಾ ಪರಸನ್ನವರ ವಂದಿಸಿದರು. ದ್ಯಾಮಣ್ಣ ಹಳವದ ಹಾಗೂ ಲಲಿತಾ ಬಡಿಗೇರ ಗುರುಗಳ ಪರಿಚಯ ಮಾಡಿದರು. ಅರ್ಚನಾ ಕೊಂಗಿ, ಚಂದ್ರಶೇಖರ ಶಿವಯ್ಯನಮಠ, ವಿನಾಯಕ ಕುಡಾಳಕರ ಸೇರಿದಂತೆ ಹಳೇ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಬಾಲ್ಯದ ನೆನಪುಗಳನ್ನು ಕೆದಕಿದರು. ಸುಜಾತಾ ಶೇಟ್ ಹಾಗೂ ಪರಿಮಳಾ ಅಂಗಡಿ ಪ್ರಾರ್ಥಿಸಿದರು.