ಬಸವಣ್ಣರವರ ಕುರಿತು ಅವಹೇಳನಕಾರಿ ಕೃತಿ ರಚನೆ ಪ್ರಕರಣ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಲೇಖಕ ರವಿ ಹಂಜೆ ಅವರನ್ನು ಕೇರಳ ರಾಜ್ಯದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಗ್ರೌಂಡ್ಸ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಬೆಂಗಳೂರು : ನಾಡಿನ ಸಾಂಸ್ಕೃತಿಕ ನಾಯಕ, ವಚನಕಾರ ಬಸವಣ್ಣರವರ ಕುರಿತು ಅವಹೇಳನಕಾರಿ ಕೃತಿ ರಚನೆ ಪ್ರಕರಣ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಲೇಖಕ ರವಿ ಹಂಜೆ ಅವರನ್ನು ಕೇರಳ ರಾಜ್ಯದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಲುಕ್ ಔಟ್ ನೋಟಿಸ್ ಹಿನ್ನೆಲೆಯಲ್ಲಿ ವಿದೇಶಕ್ಕೆ ಹಾರಲು ಯತ್ನಿಸಿದ್ದ ರವಿ ಹಂಜೆ ಅವರನ್ನು ಕೊಚ್ಚಿ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ಸುಪರ್ದಿಗೆ ಪಡೆದರು. ಬಳಿಕ ಈ ಬಗ್ಗೆ ಮಾಹಿತಿ ತಿಳಿದು ಕೊಚ್ಚಿಗೆ ತೆರಳಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು, ರವಿ ಅವರನ್ನು ವಲಸೆ ವಿಭಾಗದ ಅಧಿಕಾರಿಗಳಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ತನಿಖೆ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ವಿದೇಶಕ್ಕೆ ತೆರಳದಂತೆ ರವಿ ಅವರಿಗೆ ತಾಕೀತು ಮಾಡಿದ ಪೊಲೀಸರು, ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿ ಕಳುಹಿಸಿದ್ದಾರೆ. ಈ ನೋಟಿಸ್ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಠಾಣೆಯಲ್ಲಿ ತನಿಖಾಧಿಕಾರಿ ಮುಂದೆ ಲೇಖಕ ಸೋಮವಾರ ವಿಚಾರಣೆ ಹಾಜರಾಗಬೇಕಿದೆ.

ಸಂದರ್ಶನ ಕೂಡ ವಿವಾದ:

ವಚನಕಾರ ಬಸವಣ್ಣ ಅವರ ಕುರಿತು ‘ಬಸವಮಂಟಪ’ ಹೆಸರಿನಲ್ಲಿ ರವಿ ಕೃತಿ ರಚಿಸಿದ್ದರು. ಅಲ್ಲದೆ ಇದೇ ಪುಸಕ್ತದ ವಿಚಾರವಾಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಸವಣ್ಣ ಅವರನ್ನು ಕೊಲೆಗಡುಕ ಹಾಗೂ ಕಳ್ಳ ಎಂದು ರವಿ ನಿಂದಿಸಿದ್ದು ವಿವಾದವಾಗಿತ್ತು. ಈ ಬಗ್ಗೆ ಬಸವ ಸಮಿತಿ ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧನ ಭೀತಿಯಿಂದ ಲೇಖಕ ಅಮೆರಿಕಕ್ಕೆ ಪರಾರಿಯಾಗಲು ಯತ್ನಿಸಿದರು. ತಾನು ವಿದೇಶದಲ್ಲಿರುವುದಾಗಿಯೂ ಹೇಳಿಕೆ ನೀಡಿದ್ದರು. ಆದರೆ ಎಫ್‌ಐಆರ್ ದಾಖಲಾದ ನಂತರ ಕೇರಳಕ್ಕೆ ಪರಾರಿಯಾಗಿದ್ದ ಅವರು, ಅಲ್ಲಿನ ಕೊಚ್ಚಿ ವಿಮಾನ ನಿಲ್ದಾಣ ಮೂಲಕ ಅಮೆರಿಕಕ್ಕೆ ಹಾರಲು ಮುಂದಾಗಿದ್ದರು. ಅಷ್ಟರಲ್ಲಿ ಲುಕ್ ಔಟ್‌ ನೋಟಿಸ್ ಜಾರಿಗೊಂಡ ಕಾರಣಕ್ಕೆ ಅವರ ವಿದೇಶ ಯಾತ್ರೆಗೆ ವಲಸೆ ವಿಭಾಗದ ಅಧಿಕಾರಿಗಳು ನಿರ್ಬಂಧಿಸಿದ್ದಾರೆ. ಕೊನೆಗೆ ವಿಮಾನ ನಿಲ್ದಾಣದಲ್ಲಿ ಅವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಶನಿವಾರ ಪ್ರಶ್ನಿಸಿ ಹೇಳಿಕೆ ಪಡೆದಿದ್ದಾರೆ.

ರಾಜ್ಯವ್ಯಾಪಿ ಹೋರಾಟ

ಬೆಂಗಳೂರು: ಬಸವಣ್ಣನ ಅವಹೇಳನದ ಕೃತಿ ವಿರುದ್ಧ ಶನಿವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಪುಸ್ತಕ ನಿಷೇಧ ಮತ್ತು ಲೇಖಕನ ವಿರುದ್ಧ ಕಠಿಣ ಕ್ರಮಕ್ಕೆ ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹತ್ಯೆಗೆ 5 ಲಕ್ಷ ನಗದು

ಬೆಳಗಾವಿ: ವಿವಾದಿತ ಕೃತಿಯ ರಚಿಸಿದ ರವಿ ಹಂಜ್ ಹತ್ಯೆ ಮಾಡಿದವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ಅಥಣಿಯ ಪ್ರಕಾಶ ಮಹಾಜನ ಬಹಿರಂಗವಾಗಿ ಘೋಷಿಸಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.