ಕರ್ನಾಟಕ ಲೋಕಸೇವಾ ಆಯೋಗದ 400 ಪಶುವೈದ್ಯಾಧಿಕಾರಿಗಳ ನೇಮಕ, ಎಇಇ ನೇಮಕದಲ್ಲಿ ಭಾರೀ ಅಕ್ರಮದಿಂದ ಸುದ್ದಿಯಲ್ಲಿದ್ದ ಕೆಪಿಎಸ್ಸಿಯಲ್ಲಿ ಇನ್ನಷ್ಟು ಪರೀಕ್ಷೆಗಳಲ್ಲೂ ಭಾರೀ ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ ಅನುಮಾನ ವ್ಯಕ್ತಪಡಿಸಿದೆ.

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ 400 ಪಶುವೈದ್ಯಾಧಿಕಾರಿಗಳ ನೇಮಕ, ಎಇಇ ನೇಮಕದಲ್ಲಿ ಭಾರೀ ಅಕ್ರಮದಿಂದ ಸುದ್ದಿಯಲ್ಲಿದ್ದ ಕೆಪಿಎಸ್ಸಿಯಲ್ಲಿ ಇನ್ನಷ್ಟು ಪರೀಕ್ಷೆಗಳಲ್ಲೂ ಭಾರೀ ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ ಅನುಮಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ಅನುಮಾನ ವ್ಯಕ್ತಪಡಿಸಿರುವ ಪ್ರಕರಣಗಳ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಹೊಸ ಎಫ್‌ಐಆರ್‌ ದಾಖಲಿಸಿ, ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.

ಇ.ಡಿ ಹಂಚಿಕೊಂಡಿರುವ ಮಾಹಿತಿ ಆಧಾರದಲ್ಲಿ ಹೊಸ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸುವಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಶನಿವಾರ ಸೂಚಿಸಿದೆ.

ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಕೆಪಿಎಸ್‌ಸಿಯ ಕಾರ್ಯವೈಖರಿ ಹಾಗೂ ನೇಮಕ ಪ್ರಕ್ರಿಯೆಯ ವಿಶ್ವಾಸಾರ್ಹತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನೇಮಕದಲ್ಲಿ ಅರ್ಹತೆ ಕಡೆಗಣಿಸಿದರೆ ಕಷ್ಟಪಟ್ಟು ಓದುವ ಅಭ್ಯರ್ಥಿಗಳ ಭವಿಷ್ಯವೇನು? ಜನಸಾಮಾನ್ಯರು ವ್ಯವಸ್ಥೆಯನ್ನು ನಂಬುವುದು ಹೇಗೆ? ಕೆಪಿಎಸ್ಸಿಯ ಪ್ರತಿ ನೇಮಕದಲ್ಲೂ ಹಗರಣವಾಗುತ್ತಿದೆಯಲ್ಲಾ? ಕೆಪಿಎಸ್‌ಸಿ, ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಏಕೆ ಕಾರ್ಯನಿರ್ವಹಿಸುವುದಿಲ್ಲ ಎಂದು ಪ್ರಶ್ನಿಸಿದರು.

ಕೆಪಿಎಸ್‌ಸಿ ನಡೆಸಿದ ಹಲವು ನೇಮಕಗಳಲ್ಲಿ ಅಕ್ರಮ ನಡೆದಿದೆ. ಇ.ಡಿಯು ಎಸ್‌ಐಟಿಯೊಂದಿಗೆ ಆಘಾತಕಾರಿ ಮಾಹಿತಿ ಹಂಚಿಕೊಂಡಿದೆ. ಇ.ಡಿ ತನಿಖೆಯಲ್ಲಿ ಹೊರಬಂದಿರುವ ಮಾಹಿತಿ ನೋಡಿದರೆ ಮತ್ತಷ್ಟು ಎಫ್‌ಐಆರ್‌ ದಾಖಲಿಸುವ ಅಗತ್ಯವಿದೆಯಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌, ಇ.ಡಿ ನೀಡಿರುವ ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

3 ಎಫ್‌ಐಆರ್‌ ಆಧರಿಸಿ ಇ.ಡಿ ತನಿಖೆ:

ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ಆಯ್ಕೆ ಮಾಡಿಸುವ ಭರವಸೆ ನೀಡಿ ಹಣ ಪಡೆಯಲು ಮುಖ್ಯವಾಗಿ ಮೂರು ವಿಧಾನ ಬಳಕೆ ಮಾಡಲಾಗಿದೆ. ಪ್ರಮುಖವಾಗಿ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳ ಸೋರಿಕೆ, ನಿರ್ದಿಷ್ಟ ಅಭ್ಯರ್ಥಿಗಳಿಗೆ ಪ್ರತ್ಯೇಕ ಉತ್ತರಪಟ್ಟಿ ಸಿದ್ಧಪಡಿಸುವುದು ಹಾಗೂ ಲಿಖಿತ ಪರೀಕ್ಷೆಯ ಅಂಕಗಳ ಮಾಹಿತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇ.ಡಿ ಆರೋಪಿಸಿದೆ.

ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರು 2026ರ ಜ.7ರಂದು ಅಂತಿಮ ಕರಡು ಪ್ರಶ್ನೆಪತ್ರಿಕೆಗಳನ್ನು ಸರಿಯಾದ ಉತ್ತರಗಳೊಂದಿಗೆ ಪೆನ್‌ಡ್ರೈವ್‌ಗೆ ವರ್ಗಾವಣೆ ಮಾಡಿ ಬಸವರಾಜ್‌ ಕನ್ನಾಳೆಗೆ ನೀಡಿದ್ದಾರೆ. ವಿಲ್ಲಾಗಳಲ್ಲಿ ಕನ್ನಾಳೆಯು ಅಭ್ಯರ್ಥಿಗಳಿಂದ ಮೊಬೈಲ್‌ಗಳನ್ನು ದೂರವಿಟ್ಟು ಉತ್ತರಗಳನ್ನು ಕಂಠಪಾಠ ಮಾಡಿಸಿದ್ದಾನೆ.

ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್‌ ಸೂಚನೆಯಂತೆ ಗೀತಾ ಒದಗಿಸಿದ್ದ ಆರು ಅಭ್ಯರ್ಥಿಗಳಿಗಾಗಿ ಗಂಗ್ವಾರ್‌ ಪ್ರತ್ಯೇಕ ಉತ್ತರಪಟ್ಟಿಗಳನ್ನು ಸಿದ್ಧಪಡಿಸಿದ್ದರು. ಅರ್ಹತಾ ಪಟ್ಟಿಯಲ್ಲಿ ಅಂಕಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ಪರೀಕ್ಷಾ ನಿಯಂತ್ರಕರ ಕಚೇರಿ ಮೂಲಕ ಲಿಖಿತ ಪರೀಕ್ಷೆಯ ಅಂಕಗಳನ್ನು ಪರಿಶೀಲಿಸಿ, ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದ್ದ ಅಭ್ಯರ್ಥಿಗಳಿಂದ ಹೆಚ್ಚಿನ ಹಣಕ್ಕೆ ಬೇಡಿಕೆ ಇರಿಸಲಾಗಿತ್ತು ಎಂದು ಇ.ಡಿ ಹೇಳಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಷ್ಟೇ ಅಲ್ಲದೆ, ಸಾಹುಕಾರ್‌ ಮತ್ತು ಗಂಗ್ವಾರ್‌ ಅವರ ಅಧಿಕಾರಾವಧಿಯ ಇತರ ನೇಮಕಾತಿಗಳಲ್ಲಿಯೂ ಅಕ್ರಮದ ಸೂಚನೆಗಳಿವೆ ಎಂದು ಇ.ಡಿ ತಿಳಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನೇಮಕಾತಿ, ಕೆಎಎಸ್‌ ಗೆಜೆಟೆಡ್‌ ಪ್ರೊಬೆಷನರ್ಸ್‌ ಪರೀಕ್ಷೆ-2023, ಮೋಟಾರು ವಾಹನ ನಿರೀಕ್ಷಕರ ನೇಮಕಾತಿ-2016 ಮತ್ತು ಸಹಾಯಕ ಎಂಜಿನಿಯರ್‌ ನೇಮಕಾತಿ-2024ರಲ್ಲೂ ಅಕ್ರಮ ನಡೆದಿರುವ ಸಾಧ್ಯತೆಗಳು ಕಂಡುಬರುತ್ತಿವೆ ಎಂದು ಇ.ಡಿ ಹೈಕೋರ್ಟ್‌ಗೆ ಸಲ್ಲಿಸಿರುವ ತನ್ನ ಪ್ರಮಾಣ ಪತ್ರದಲ್ಲಿ ತಿಳಿಸಿದೆ.

ಎಇಇ, ಕೆಎಎಸ್‌, ಎಂವಿಐ ನೇಮಕಾತಿಗಳಲ್ಲೂ ಅಕ್ರಮ?

ಪಶುವೈದ್ಯಾಧಿಕಾರಿಗಳ ನೇಮಕಾತಿಯಷ್ಟೇ ಅಲ್ಲದೆ, ಸಾಹುಕಾರ್‌ ಮತ್ತು ಗಂಗ್ವಾರ್‌ ಅವರ ಅಧಿಕಾರಾವಧಿಯಲ್ಲಿ ಇತರ ನೇಮಕಾತಿಗಳಲ್ಲಿಯೂ ಅಕ್ರಮದ ಸೂಚನೆಗಳಿವೆ ಎಂದು ಇ.ಡಿ ತಿಳಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನೇಮಕಾತಿ, ಕೆಎಎಸ್‌ ಗೆಜೆಟೆಡ್‌ ಪ್ರೊಬೇಷನರ್ಸ್‌ ಪರೀಕ್ಷೆ 2023, ಮೋಟಾರು ವಾಹನ ನಿರೀಕ್ಷಕರ ನೇಮಕಾತಿ-2016 ಮತ್ತು ಸಹಾಯಕ ಎಂಜಿನಿಯರ್‌ ನೇಮಕಾತಿ-2024 ರಲ್ಲೂ ಅಕ್ರಮ ನಡೆದಿರುವ ಸಾಧ್ಯತೆಗಳು ಕಂಡುಬರುತ್ತಿವೆ ಎಂದು ಇ.ಡಿ ತನ್ನ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಹೀಗಾದ್ರೆ ಹೇಗೆ?: ಹೈ

ಕೆಪಿಎಸ್ಸಿಯ ಪ್ರತಿ ಪರೀಕ್ಷೆಯಲ್ಲೂ ಅಕ್ರಮದ ಆರೋಪ ಕೇಳಿಬರುತ್ತಿದೆ. ಹೀಗಾದರೆ ಮೆರಿಟ್‌ ವಿದ್ಯಾರ್ಥಿಗಳ ಕಥೆ ಏನು? ಯುಪಿಎಸ್ಸಿ ರೀತಿ ಕೆಪಿಎಸ್ಸಿ ಏಕೆ ಕೆಲಸ ಮಾಡುವುದಿಲ್ಲ ಎಂದು ಪರೀಕ್ಷಾ ಸಂಸ್ಥೆ ವಿರುದ್ಧ ಹೈಕೋರ್ಟ್‌ ಕಿಡಿಕಾರಿತು.