ಅಕ್ರಮವಾಗಿ ₹10 ಕೋಟಿ ನಗದು ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಹಾಗೂ ನಟ ಧನ್ವೀರ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಆದಾಯ ತೆರಿಗೆ (ಐ.ಟಿ) ಇಲಾಖೆಗೆ ದೂರು ಸಲ್ಲಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಅಕ್ರಮವಾಗಿ ₹10 ಕೋಟಿ ನಗದು ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಹಾಗೂ ನಟ ಧನ್ವೀರ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಆದಾಯ ತೆರಿಗೆ (ಐ.ಟಿ) ಇಲಾಖೆಗೆ ದೂರು ಸಲ್ಲಿಕೆಯಾಗಿದೆ.

ವಕೀಲ ಪ್ರಶಾಂತ್ ಮೆಥಲ್ ಎಂಬುವರು ಐಟಿ ಮತ್ತು ಇ.ಡಿಗೆ ದೂರು ಸಲ್ಲಿಸಿದ್ದು, ವಿಜಯಲಕ್ಷ್ಮಿ ದರ್ಶನ್ ಮತ್ತು ಧನ್ವೀರ್ ನಡುವೆ ಕಾನೂನು ಬಾಹಿರವಾಗಿ ಕೋಟ್ಯಂತರ ರುಪಾಯಿ ವಹಿವಾಟು ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವೆ ನಡೆದ ಗಲಾಟೆಗೆ ₹10 ಕೋಟಿ ವ್ಯವಹಾರ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸಂಪೂರ್ಣ ತನಿಖೆಗೆ ಮನವಿ:

ದರ್ಶನ್ ಅವರ ಕಾನೂನು ಹೋರಾಟಕ್ಕಾಗಿ ಧನ್ವೀರ್ ಮತ್ತು ವಿಜಯಲಕ್ಷ್ಮಿ ಅವರ ನಡುವೆ ₹10 ಕೋಟಿ ವರ್ಗಾವಣೆ ನಡೆದಿದೆ ಎನ್ನಲಾಗಿದೆ. ಈ ಅಕ್ರಮ ವ್ಯವಹಾರದ ಸಂಪೂರ್ಣ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ನಿಯಮಗಳ ಪ್ರಕಾರ ₹2 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ವ್ಯವಹಾರ ಮಾಡುವಂತಿಲ್ಲ. ಆದರೆ, ಈ ಪ್ರಕರಣದಲ್ಲಿ ಕಾನೂನು ಮೀರಿ ಬರೋಬ್ಬರಿ ₹10 ಕೋಟಿ ನಗದು ರೂಪದಲ್ಲಿ ವ್ಯವಹಾರ ನಡೆಸಲಾಗಿದೆ. ಈ ಭಾರೀ ಹಣದ ಮೂಲ ಯಾವುದು ಮತ್ತು ಈ ಅಕ್ರಮ ವಹಿವಾಟಿನ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.

ಸಾಮಾನ್ಯ ಜನ ಹಾಗೂ ಶ್ರೀಮಂತರಿಗೂ ದೇಶದ ಕಾನೂನು ಒಂದೇ. ದರ್ಶನ್ ವಿರುದ್ಧದ ಕೇಸ್‌ನಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವ ಮಾದರಿಯಲ್ಲೇ, ಈ ಅಕ್ರಮ ವಹಿವಾಟಿನ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ವಕೀಲ ಪ್ರಶಾಂತ್ ಮೆಥಲ್ ಅವರು ದೂರಿನಲ್ಲಿ ತಿಳಿಸಿದ್ದಾರೆ.