ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಕಟ್ಟಡದ ಸಿಂಡಿಕೇಟ್ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ನಡೆಯಿತು.
ಹೊಸಪೇಟೆ: ಆಧುನಿಕ ಭಾರತದ ನವ ನಿರ್ಮಾಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಅತ್ಯಂತ ಅವಶ್ಯಕವಾಗಿವೆ. ಸಮಾಜದ ವಿವಿಧ ವಲಯಗಳಲ್ಲಿ ಅವರ ಚಿಂತನೆಗಳನ್ನು ಅನ್ವಯಿಸಿ ದೇಶದ ಭವಿಷ್ಯ ರೂಪಿಸಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಕಟ್ಟಡದ ಸಿಂಡಿಕೇಟ್ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಜನಸಾಮಾನ್ಯರ ನಡುವೆ ಕಳೆದ ಐದು ದಶಕಗಳಿಂದ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ತತ್ವಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಪ್ರಮುಖವಾಗಿವೆ. ಭಾರತದ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳ ಮೇಲೆ ಅವರ ತತ್ವಗಳು ಮಹತ್ವದ ಪ್ರಭಾವ ಬೀರಿವೆ ಎಂದು ಹೇಳಿದರು.ಅಂಬೇಡ್ಕರ್ ಅವರನ್ನು ಕೇವಲ ಹೋರಾಟಗಾರರಾಗಿ ಅಥವಾ ಹಕ್ಕುಗಳ ಪ್ರತಿಪಾದಕರಾಗಿ ಮಾತ್ರ ನೋಡದೇ, ಸಮಾಜಕ್ಕೆ ಉತ್ತಮ ದಾರಿ ತೋರಿದ ಮಾರ್ಗದರ್ಶಕರಾಗಿ ಗುರುತಿಸಬೇಕು ಎಂದು ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಅಂಬೇಡ್ಕರ್ ಅವರ ಕುರಿತು ಹತ್ತು ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಅವುಗಳನ್ನು ಸದ್ಯದಲ್ಲಿಯೇ ಬಿಡುಗಡೆಗೊಳಿಸಲಾಗುವುದು ಎಂದು ಅವರು ತಿಳಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ರಿಸರ್ವ್ ಬ್ಯಾಂಕ್ ಪರಿಕಲ್ಪನೆ ಸೇರಿದಂತೆ ಮಹಿಳೆಯರ ಹಕ್ಕುಗಳ ಸ್ಥಾಪನೆಗೂ ಅಂಬೇಡ್ಕರ್ ಅವರ ಕೊಡುಗೆ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತ್ವ ಎಂಬ ಮೌಲ್ಯಗಳನ್ನು ಸಂವಿಧಾನದಲ್ಲಿ ಪ್ರತಿಷ್ಠಾಪಿಸಿದ ಮಹಾನ್ ಚೇತನರಾಗಿದ್ದ ಅಂಬೇಡ್ಕರ್, ಮನುಷ್ಯರ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಕನಸು ಕಂಡಿದ್ದರು ಎಂದು ಅವರು ಹೇಳಿದರು.
ಉಪಕುಲಸಚಿವ ಬಿ. ಗುರುಬಸಪ್ಪ ಸ್ವಾಗತಿಸಿದರು. ಆರ್.ವಿ. ದೇಶಪಾಂಡೆ ವಂದಿಸಿದರು.