ಕನ್ನಡಪ್ರಭ ವಾರ್ತೆ ತುಮಕೂರುಸಾರ್ವಜನಿಕ ಸೇವೆಗೆ, ಬಿಜೆಪಿ ಸಂಘಟನೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಪಕ್ಷನಿಷ್ಠೆ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ನಗರದ ಬಿಜಿಎಸ್ ವೃತ್ತದಲ್ಲಿ ಯಡಿಯೂರಪ್ಪನವರ ಅಭಿಮಾನಿ ಆಟೋ ಯಡಿಯೂರಪ್ಪ (ಕೆ.ಎಂ.ಶಿವಕುಮಾರ್) ಅವರ ನೇತೃತ್ವದಲ್ಲಿ ಹಾಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪನವರ ೫೦ನೇ ವರ್ಷದ ರಾಜಕೀಯ ಜೀವನದ ಸಂಭ್ರಮ ಹಾಗೂ ಅವರ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, 50 ವರ್ಷಗಳ ಕಾಲ ವಿರಮಿಸದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಶ್ರೇಯ ಯಡಿಯೂರಪ್ಪನವರಿಗೆ ಹೆಚ್ಚಿನದಾಗಿ ಸಲ್ಲುತ್ತದೆ ಎಂದರು.ತುಮಕೂರು ನಗರದಲ್ಲಿ ನಾನು ಶಾಸಕನಾಗಬೇಕಾದರೆ ಬಿಜೆಪಿಯ ಜೊತೆಗೆ ಯಡಿಯೂರಪ್ಪನವರ ವರ್ಚಸ್ಸೂ ಕಾರಣ. ಅವರ ಋಣ ನನ್ನ ಮೇಲಿದೆ ಎಂದು ಹೇಳಿದ ಶಾಸಕ ಜ್ಯೋತಿಗಣೇಶ್, ಬಿಜೆಪಿಯನ್ನು ಸಧೃಢವಾಗಿ ಕಟ್ಟಿ ಮತ್ತೆ ಅಧಿಕಾರಕ್ಕೆ ತರುವ ಮೂಲಕ ಕಾರ್ಯಕರ್ತರು ಯಡಿಯೂರಪ್ಪನವರಿಗೆ ಜನ್ಮದಿನದ ಕೊಡುಗೆ ನೀಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಶಿಕಾರಿಪುರದ ಪುರಸಭೆ ಸದಸ್ಯರಾಗಿ ೫೦ ವರ್ಷಗಳ ಹಿಂದೆ ಸಾರ್ವಜನಿಕ ಜೀವನ ಪ್ರವೇಶಿಸಿದ ಯಡಿಯೂರಪ್ಪನವರು ಜನಸಾಮಾನ್ಯರ ಧ್ವನಿಯಾಗಿ ಸತತ ಹೋರಾಟದ ಮೂಲಕ ಬಿಜೆಪಿಯ ಬಲವರ್ಧನೆಗೆ ಶ್ರಮಿಸಿ ಜನಾನುರಾಗಿ ನಾಯಕರಾಗಿ ಬೆಳೆದು ಲಕ್ಷಾಂತರ ಜನರ ಅಭಿಮಾನ ಪಡೆದಿದ್ದಾರೆ. ಇಂತಹ ನಾಯಕನ ಜನ್ಮದಿನವನ್ನು ಇಂದು ಎಲ್ಲಾ ಕಾರ್ಯಕರ್ತರು ಹೆಮ್ಮೆಯಿಂದ ಆಚರಣೆ ಮಾಡುತ್ತಿದ್ದಾರೆ ಎಂದರು.ರೈತಪರ ನಾಯಕರಾಗಿ ಯಡಿಯೂರಪ್ಪನವರು ದೇಶದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡಿದರು. ಅನೇಕ ಜನರ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಜನರಿಗೆ ಕೊಡುಗೆ ನೀಡಿದರು. ಅವರು ಮುಖ್ಯಮಂತ್ರಿಯಾಗಿದ್ದಾಗ ತುಮಕೂರು ನಗರಪಾಲಿಕೆಗೆ 100 ಕೋಟಿ ರು. ಅನುದಾನ ನೀಡಿ ನಗರದ ಅಭಿವೃದ್ಧಿಗೆ ನೆರವಾದರು ಎಂದು ಹೇಳಿದರು.ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್.ಚಂದ್ರಶೇಖರ್ ಮಾತನಾಡಿ, 1980 ರಲ್ಲಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವದಲ್ಲಿರಲಿಲ್ಲ. ಆಗ ಲೋಕಸಭೆಯಲ್ಲಿ ಇಬ್ಬರು ಬಿಜೆಪಿ ಸಂಸದರಿದ್ದರು. ಪಕ್ಷ ಬೆಳೆದು ಸಂಸದರ ಸಂಖ್ಯೆ 302ಕ್ಕೆ ಏರಿತು. ಮೂರು ಬಾರಿ ಬಿಜೆಪಿ ದೇಶ ಆಳಿತು. ರಾಜ್ಯದಲ್ಲೂ ಇದೇ ಪರಿಸ್ಥಿತಿ ಇತ್ತು. ಹೊಸ ಸೂರ್ಯ ಉದಯಿಸಿದಂತೆ ಯಡಿಯೂರಪ್ಪನವರು ಬಂದು ಬಿಜೆಪಿಯನ್ನು ಬಲವರ್ಧನೆಗೆ ತರಲು ಶ್ರಮಿಸಿದರು. ಇಂದು ರಾಜ್ಯದಲ್ಲಿ ಬಿಜೆಪಿ ಈ ಮಟ್ಟದಲ್ಲಿ ಬೆಳೆಯಲು ಪ್ರಮುಖವಾಗಿ ಯಡಿಯೂರಪ್ಪನವರ ಶ್ರಮ ಕಾರಣ ಎಂದರು.ದೇಶದಲ್ಲಿ ಬಿಜೆಪಿಯಲ್ಲಿ ವಾಜಪೇಯಿ, ಅಡ್ವಾಣಿ ನಂತರದ ಸ್ಥಾನದಲ್ಲಿ ಯಡಿಯೂರಪ್ಪನವರಿದ್ದರು. ಸಂಘಪರಿವಾರ ಮೂಲದಿಂದ ಬಂದಿದ್ದ ಹಾಗೂ ದಕ್ಷಿಣ ಭಾರತ ನಾಯಕನಾಗಿ ಯಡಿಯೂರಪ್ಪ ಪ್ರಧಾನಿ ಹುದ್ದೆಯ ಸಮೀಪವಿದ್ದರು. ಆದರೆ ಸುಳ್ಳು ಕೇಸು ಹಾಕಿಸಿ ಕಾಂಗ್ರೆಸ್‌ನವರು ಅವರನ್ನು ಜೈಲಿಗೆ ಕಳಿಸಿ ಅವರ ಹೆಸರನ್ನು, ಪ್ರಧಾನಿಯಾಗುವ ಅವಕಾಶವನ್ನು ಹಾಳು ಮಾಡಿದರು ಎಂದು ಟೀಕಿಸಿದರು.ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರಿಗೆ ಯಡಿಯೂರಪ್ಪನವರ ಬದುಕು ಹಾಗೂ ಹೋರಾಟ ಪಾಠವಾಗಲಿ, ಅವರ ರೀತಿ ಪಕ್ಷ ನಿಷ್ಠೆ, ಬದ್ಧತೆ ರೂಢಿಸಿಕೊಳ್ಳಲಿ ಎಂದು ಹೇಳಿದರು.ಮುಖಂಡ ಎಸ್.ಪಿ.ಚಿದಾನಂದ್ ಮಾತನಾಡಿ, ರೈತರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ, ಕೃಷಿ ಬಜೆಟ್ ಮಂಡನೆ ಮಾಡಿದ್ದ, ವಿಶೇಷ ಯೋಜನೆಗಳ ಮೂಲಕ ನಾಡಿಗೆ ದೊಡ್ಡ ಕೊಡುಗೆ ನೀಡಿದ ಯಡಿಯೂರಪ್ಪನವರ ಸೇವೆಯನ್ನು ಅವರ ಹುಟ್ಟುಹಬ್ಬದಂದು ಎಲ್ಲರೂ ಗೌರವಿಸಬೇಕು ಎಂದರು.
ಕಾರ್ಯಕ್ರಮ ಆಯೋಜನೆ ಮಾಡಿದ್ದ ಯಡಿಯೂರಪ್ಪ ಅಭಿಮಾನಿ ಆಟೋ ಯಡಿಯೂರಪ್ಪ (ಕೆ.ಎಂ.ಶಿವಕುಮಾರ್), ನಗರ ಬಿಜೆಪಿ ಅಧ್ಯಕ್ಷ ಟಿ.ಕೆ.ಧನುಷ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಹೆಚ್.ಎಂ.ರವೀಶಯ್ಯ, ನಿಸರ್ಗ ರಮೇಶ್, ಬಂಬೂ ಮೋಹನ್, ಸತ್ಯಮಂಗಲ ಜಗದೀಶ್, ನಂಜುಂಡಸ್ವಾಮಿ ನಗರಪಾಲಿಕೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ್, ವಿಷ್ಣುವರ್ಧನ್, ಮುಖಂಡರಾದ ನಟರಾಜ್, ಸಿದ್ಧಗಂಗಯ್ಯ, ಅಂಜನಮೂರ್ತಿ, ಜಯಪ್ರಕಾಶ್, ವೆಂಕಟೇಶಾಚಾರ್, ಎಂ.ಗೋಪಿ, ರೇಖಾ ಶಿವಕುಮಾರ್, ಮಂಜುಳಾ ಮೊದಲಾದವರು ಭಾಗವಹಿಸಿದ್ದರು.ಬಿಎಸ್ವೈ ಹೋರಾಟ ಕಾರ್ಯಕರ್ತರಿಗೆ ಪ್ರೇರಣೆಯಾಗಲಿ
ಸಾರ್ವಜನಿಕ ಸೇವೆಗೆ, ಬಿಜೆಪಿ ಸಂಘಟನೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಪಕ್ಷನಿಷ್ಠೆ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.