- ಜಿಲ್ಲಾ ಸಿಪಿಐ, ಎಐಟಿಯುಸಿ ನೇತೃತ್ವದಲ್ಲಿ ಮೇ ದಿನಾಚರಣೆ, ಹುತಾತ್ಮರ 56ನೇ ವಾರ್ಷಿಕೋತ್ಸವ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಮೇ ದಿನಾಚರಣೆ ಕೇವಲ ಸಾಂಕೇತಿಕ ಆಚರಣೆಯಾಗದೇ ಶ್ರಮಿಕ ವರ್ಗ, ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆ ಆಗಬೇಕು ಎಂದು ಎಐಟಿಯುಸಿ ರಾಜ್ಯಾಧ್ಯಕ್ಷ ಬಾಬು ಮ್ಯಾಥ್ಯೋ ಆಶಿಸಿದರು.

ನಗರದ ಜಯದೇವ ವೃತ್ತ ಸಮೀಪದ ನಾಟ್ಯಾವಾರ್ಯ ಶ್ರೀನಿವಾಸ ಕುಲಕರ್ಣಿ ರಸ್ತೆಯಲ್ಲಿ ಶುಕ್ರವಾರ ಜಿಲ್ಲಾ ಸಿಪಿಐ, ಎಐಟಿ ಯುಸಿ ಏರ್ಪಡಿಸಿದ್ದ ಮೇ ದಿನಾಚರಣೆ ಹಾಗೂ ಹುತಾತ್ಮರ 56ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಶಾಂತಿಯುತ ಜಗತ್ತಿನ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ವಿಷಯಗಳನ್ನು ಅರ್ಥಮಾಡಿಕೊಂಡು ಚರ್ಚಿಸಿ, ಜನಜಾಗೃತಿ ಮೂಡಿಸಬೇಕು ಎಂದರು.

ಮಧ್ಯ ಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕದ ನಡುವಿನ ಸಂಘರ್ಷ ವಿಶ್ವ ಶಾಂತಿಗೆ ಗಂಭೀರವಾದ ಧಕ್ಕೆ ತರುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ನೆತನ್ಯಾಹು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜಗತ್ತಿನ ಶಾಂತಿಗೆ ಹಾನಿ ಮಾಡುತ್ತಿವೆ. ಇಂಪೀರಿಯಲಿಸಂ ಮೂಲಕ ಶ್ರೀಮಂತ ರಾಷ್ಟ್ರಗಳು ಮತ್ತು ಕಂಪನಿಗಳು ಜಗತ್ತನ್ನು ತಮ್ಮ ಹಿಡಿತದಲ್ಲಿಡಲು ಪ್ರಯತ್ನಿಸುತ್ತಿವೆ. ಕೊಲ್ಲಿ ಯುದ್ಧದ ಭೀಕರ ಪರಿಣಾಮವಾಗಿ ಸಾವಿರಾರು ನಿರಪರಾಧಿಗಳು, ಶಾಲಾ ಮಕ್ಕಳೂ ಸೇರಿದಂತೆ, ಪ್ರಾಣ ಕಳೆದುಕೊಳ್ಳುತ್ತಿರುವುದು ದುಃಖಕರ ಸಂಗತಿ. ಯುದ್ಧದ ಪರಿಣಾಮವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಭಾರತದಲ್ಲಿ ಹಸಿರು ಕ್ರಾಂತಿಯ ನಂತರ ಆಹಾರ ಉತ್ಪಾದನೆ 55 ಮಿಲಿಯನ್ ಟನ್‌ನಿಂದ 350 ಮಿಲಿಯನ್ ಟನ್‌ವರೆಗೆ ಏರಿಕೆಯಾಗಿದೆ. ಆದರೂ, ಜನರಿಗೆ ಆಹಾರ ಖರೀದಿಸಲು ಅಗತ್ಯ ಹಣದ ಕೊರತೆ ಎದುರಾಗುತ್ತಿದೆ. ಈ ಹಿಂದೆ ಸಣ್ಣ ಕೈಗಾರಿಕೆಗಳು ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದ್ದವು. ದೊಡ್ಡ ಐಟಿ ಕಂಪನಿಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಾದ ಪರಿಣಾಮ ಉದ್ಯೋಗಾವಕಾಶಗಳು ಕುಸಿಯುತ್ತಿವೆ. ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ಹೊರಗಿಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯಷ್ಟೆ ಅಲ್ಲದೆ ಉತ್ಪಾದನಾ ಗುಣಮಟ್ಟದ ಮೇಲೂ ಹಾನಿಕಾರಕ ಪರಿಣಾಮ ಬೀರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಹಳೆಯ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ 4 ಹೊಸ ಲೇಬರ್ ಕೋಡ್ ಜಾರಿಗೊಳಿಸಿರುವುದು ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗಿದೆ. ಕಾನೂನುಗಳಿಂದ ಕೆಲಸದ ಅವಧಿ ಹೆಚ್ಚುವ ಸಾಧ್ಯತೆ ಇದೆ. ಐಟಿ ಸೇರಿದಂತೆ ಹಲವೆಡೆ ಮಹಿಳೆಯರು ದಿನಕ್ಕೆ 12 ಗಂಟೆಗಳವರೆಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಆರೋಗ್ಯ ಮತ್ತು ಕುಟುಂಬ ಜೀವನದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಸಿಪಿಐ ಕಾರ್ಯದರ್ಶಿ ಆವರಗೆರೆ ಚಂದ್ರು, ಆವರಗೆರೆ ಎಚ್.ಜಿ. ಉಮೇಶ್, ವಿ. ಲಕ್ಷ್ಮಣ್,ಎ.ಎಚ್. ಕೊಟ್ರಪ್ಪ, ಎಸ್.ಎಸ್. ಮಲ್ಲಮ್ಮ, ಸರೋಜಾ, ಪಿ. ಷಣ್ಮುಖಸ್ವಾಮಿ, ಐರಣಿ ಚಂದ್ರು ಇತರರು ಇದ್ದರು. ಕಾರ್ಯಕ್ರಮಕ್ಕೆ ಮುನ್ನ ನಡೆದ ಕಾರ್ಮಿಕರ ಮೆರವಣಿಗೆಯಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್ ಪಾಲ್ಗೊಂಡಿದ್ದರು.

- - -

(ಕೋಟ್‌) ಒಂದು ಕಾಲದಲ್ಲಿ ಹತ್ತಿ ಗಿರಣಿಗಳ ಮೂಲಕ ಕಾರ್ಮಿಕ ಹೋರಾಟದ ಕೇಂದ್ರವಾಗಿದ್ದ ದಾವಣಗೆರೆ, ಜಾಗತೀಕರಣ ಮತ್ತು ಖಾಸಗೀಕರಣದ ಪರಿಣಾಮವಾಗಿ ಕೈಗಾರಿಕಾ ಪ್ರಭಾವವನ್ನು ಕಳೆದುಕೊಂಡಿದೆ. 1991ರ ನಂತರ ಅನೇಕ ಕೈಗಾರಿಕೆಗಳು ಮುಚ್ಚಿ ದ ಪರಿಣಾಮ ಸಾವಿರಾರು ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು.

- ಕೆ. ರಾಘವೇಂದ್ರ ನಾಯರಿ, ಜಿಲ್ಲಾಧ್ಯಕ್ಷ, ಎಐಟಿಯುಸಿ.

- - -

-1ಕೆಡಿವಿಜಿ39. 40: ದಾವಣಗೆರೆಯಲ್ಲಿ ಜಿಲ್ಲಾ ಸಿಪಿಐ, ಎಐಟಿ ಯುಸಿ ಏರ್ಪಡಿಸಿದ್ದ ಮೇ ದಿನಾಚರಣೆ ಹಾಗೂ ಹುತಾತ್ಮರ 56ನೇ ವಾರ್ಷಿಕೋತ್ಸವವನ್ನು ರಾಜ್ಯಾಧ್ಯಕ್ಷ ಬಾಬು ಮ್ಯಾಥ್ಯೋ ಉದ್ಘಾಟಿಸಿದರು.