ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊನ್ನಾವರಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹಿಂದುಳಿದ ವರ್ಗಗಳ ವೇದಿಕೆ ಹಾಗೂ ತಾಲೂಕಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಮುಖ ಸುರಾಲು ಚಂದ್ರಶೇಖರ ಭಟ್, ಮನುಷ್ಯ ಕುಲದಲ್ಲಿ ಇರುವುದು ಗಂಡು ಮತ್ತು ಹೆಣ್ಣು ಎಂಬ ಎರಡೇ ಜಾತಿಗಳು. ಅಂಬೇಡ್ಕರ್ ಅವರ ಬಗ್ಗೆ ಅನೇಕರು ಮಾತನಾಡುತ್ತಾರೆ, ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಬೇಸರದ ಸಂಗತಿ. ನಾವೆಲ್ಲರೂ ಒಂದೇ ಎನ್ನುವುದು ಕೇವಲ ವೇದಿಕೆಯ ಭಾಷಣಕ್ಕೆ ಸೀಮಿತವಾಗದೆ, ಕೃತಿಯಲ್ಲೂ ಜಾರಿಗೆ ಬರಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಸಮಾನತೆ ಕಾಣುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.ಪಿಎಸ್ಐ ನವೀನ ನಾಯ್ಕ ಮಾತನಾಡಿ, ಅಂಬೇಡ್ಕರ್ ಅಪ್ರತಿಮ ಜ್ಞಾನದಾಹಿಗಳಾಗಿದ್ದರು. ನಾವು ಒಂದು ಪದವಿ ಪಡೆಯಲು ಸಂಕಷ್ಟ ಪಡುವ ಈ ಕಾಲದಲ್ಲಿ, ಅವರು ನಿರಂತರ ಅಧ್ಯಯನದ ಮೂಲಕ 32 ಪದವಿಗಳನ್ನು ಗಳಿಸಿದ್ದರು. ಇಂದಿನ ಪೀಳಿಗೆ ಮೊಬೈಲ್ ವ್ಯಾಮೋಹಕ್ಕೆ ಬಿದ್ದು ದಾರಿ ತಪ್ಪುತ್ತಿದೆ. ಮಕ್ಕಳನ್ನು ಸರಿದಾರಿಗೆ ತರುವುದು ಪಾಲಕರ ಜವಾಬ್ದಾರಿ. ಶಿಕ್ಷಣವೇ ಅತ್ಯಂತ ಶಕ್ತಿಯುತ ಅಸ್ತ್ರ ಎಂಬ ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ನಾವೆಲ್ಲ ಇಂದು ಗೌರವಯುತವಾಗಿ ಬದುಕುತ್ತಿದ್ದೇವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ವಿಕ್ರಮ್ ನಾಯ್ಕ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಾಧಕರನ್ನು ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಡಾ. ರಮೇಶ ನಾಯ್ಕ, ಡಾ. ಪ್ರಕಾಶ ನಾಯ್ಕ, ಪಪಂ ಮುಖ್ಯಾಧಿಕಾರಿ ಯೇಸು ಸುಬ್ಬಣ್ಣ, ಡಾ.ಜಿ.ಪಿ. ಪಾಠಣಕರ್, ನೌಕರರ ಸಂಘದ ಅಧ್ಯಕ್ಷ ಅಣ್ಣಪ್ಪ ಮುಕ್ರಿ, ಜಿ.ಟಿ. ಪೈ ಸೇರಿದಂತೆ ಹಲವರು ಉಪಸ್ಥಿತರಿದ್ದು ಮಾತನಾಡಿದರು.ಈ ಸಂದರ್ಭ ಡಾ. ರಾಜು ಮಾಳಗಿಮನಿ, ಜಗದೀಪ ತೆಂಗೇರಿ, ಸುಭಾಷ್ ಹರಿಜನ, ಮಂಜುನಾಥ್ ನಾಯ್ಕ, ಉಮೇಶ್ ಮೇಸ್ತ ಮುಂತಾದವರಿದ್ದರು.