- ಜನಸಂಪರ್ಕ ಕಚೇರಿಯಲ್ಲಿ ಜನ್ಮದಿನ ಸಮಾರಂಭ

- ಹರಿಹರ ಶಾಸಕರಿಗೆ ಶುಭಾಶಯ ಕೋರಿದ ಕೇಂದ್ರದ ಮಾಜಿ ಸಂಸದ

- ಹರಿಹರ ಕ್ಷೇತ್ರ ಸಮಗ್ರ ಅಭಿವೃದ್ಧಿಗಾಗಿ ಹರೀಶರಿಮದ ಹಲವಾರು ಕೆಲಸ

- - -

ಕನ್ನಡಪ್ರಭ ವಾರ್ತೆ ಹರಿಹರ


ಶಾಸಕರಾಗಿ 2ನೇ ಬಾರಿ ಆಯ್ಕೆ ಆಗಿರುವ ಬಿ.ಪಿ. ಹರೀಶ್ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ಬಾರಿ ನಮ್ಮ ಸರ್ಕಾರ ಬರುವುದು ನಿಶ್ಚಿತ. ಆಗ ಬಿ.ಪಿ.ಹರೀಶ್ ಅವರು ಮತ್ತೊಮ್ಮೆ ಶಾಸಕರಾಗಿ ನಮ್ಮ ಸರ್ಕಾರದಲ್ಲಿ ಮಂತ್ರಿಯಾಗಲಿ ಎಂದು ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಶುಭ ಹಾರೈಸಿದರು.

ನಗರದ ಬಿ.ಪಿ. ಹರೀಶ್ ಅವರ ಅಭಿಮಾನಿಗಳು ಜನಸಂಪರ್ಕ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿ.ಪಿ.ಹರೀಶ್ ಅವರಿಗೆ ಶುಭ ಹಾರೈಸಿ ಅವರು ಮಾತನಾಡಿದರು. ಬಿ.ಪಿ.ಹರೀಶ್ ನೇರ-ನಿಷ್ಠೂರ ನುಡಿಗೆ ಹೆಸರಾದವರು. ಬಡವರ ಕ್ಷೇತ್ರದ ಹಿತದೃಷ್ಠಿಯಿಂದ ಅನೇಕ ಸಮಸ್ಯೆಗಳ ಕುರಿತು ಹೋರಾಟ ನಡೆಸಿದ್ದಾರೆ ಎಂದರು.

ಕ್ಷೇತ್ರದ ಸಮಸ್ಯೆಗಳಿಗೆ ನಡೆಸಿದ ಹೋರಾಟದ ವಿಷಯ ವಿಧಾನಸೌಧದ ಒಳಗೂ, ಹೊರಗೂ ಸಾಕಷ್ಟು ಚರ್ಚೆಯಾಗಿದೆ. ಅದರಲ್ಲಿ ಅನೇಕ ಸಮಸ್ಯೆಗಳಿಗೆ ಫಲ ಸಿಕ್ಕಿದೆ. ಹೀಗಾಗಿ, ಅವರೊಬ್ಬ ಜನನಾಯಕರಾಗಿ ಬೆಳೆದಿದ್ದಾರೆ. ಮುಂದಿನ ನಮ್ಮ ಸರ್ಕಾರದಲ್ಲಿ ಹರೀಶ್ ಅವರು ಸಚಿವರಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮಕ್ಕೂ ಮುನ್ನ ಬಿ.ಪಿ. ಹರೀಶ್ ಅವರು ಜನ್ಮದಿನದ ಪ್ರಯುಕ್ತ ನಗರ ಹಾಗೂ ಮಲೆಬೆನ್ನೂರು ಪಟ್ಟಣದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಬೆಳಗ್ಗೆ ಹರಿಹರೇಶ್ವರ ದೇವಸ್ಥಾನ, ಗುರು ರಾಘವೇಂದ್ರ ಮಠ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ನಗರದ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿ ಹಾಗೂ ನಗರಸಭಾ ಕ್ರೀಡಾಂಗಣದ ಪಶ್ಚಿಮ ಕಾಂಪೌಂಡ್ ಗೋಡೆಯ ಅಂಚಿನಿಂದ ರಚನಾ ಕ್ರೀಡಾ ಕ್ಲಬ್‌ವರೆಗಿನ ರಸ್ತೆ ಅಭಿವೃದ್ಧಿ, ನಗರ ಪೊಲೀಸ್ ಠಾಣೆ ಪಕ್ಕದಲ್ಲಿ ತರಕಾರಿ ಮಾರುಕಟ್ಟೆಗೆ ತೆರಳುವ ರಸ್ತೆ, ಕುಂಬಾರ ಓಣಿಯ ವಿರಕ್ತ ಮಠದಲ್ಲಿ ದನ ಕರುಗಳಿಗೆ ಕುಡಿಯುವ ನೀರಿನ (ಅರವಟ್ಟಿಗೆ) ತೆರೆದ ಬಾನಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಗುರು ರಾಘವೇಂದ್ರ ಮಠದ ಗೋಶಾಲೆಗೆ ಬತ್ತದ ಹುಲ್ಲು (ಮೇವು) ಸಮರ್ಪಣೆ, ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಿದರು. ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ವಿವಿಧ ಜಾತಿಗಳ ಸಸಿಗಳ ನೆಡುವ ಕಾಮಗಾರಿಗೆ ಚಾಲನೆ ನೀಡಿದರು.

ಸಂಜೆ ಮಹಜೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು. ಅನಂತರ ಬೀರೂರು- ಸಮ್ಮಸಗಿ ರಾಜ್ಯ (ಹಳೇ ಪಿ.ಬಿ. ರಸ್ತೆ) ಹೆದ್ದಾರಿ ಮಧ್ಯದಲ್ಲಿ ಹಾಗೂ ಹೊಸಪೇಟೆ- ಶಿವಮೊಗ್ಗ ರಸ್ತೆಯ ಮಧ್ಯಭಾಗದಲ್ಲಿರುವ ಟಸ್ಕರ್ ಪೋಲ್‌ಗಳಿಗೆ ಅಳವಡಿಸಿರುವ ಎಲ್‌ಇಡಿ ಸ್ಟ್ರೀಪ್, ಬೀದಿದೀಪಗಳಿಗೆ ಚಾಲನೆ ನೀಡಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ದಾವಣಗೆರೆ ಉತ್ತರ ಕ್ಷೇತ್ರದ ಮಾಜಿ ಅಧ್ಯಕ್ಷ ಸಂಗನಗೌಡ, ವಿಧಾನ ಪರಿಷತ್ತು ಅಭ್ಯರ್ಥಿ ಕೆ.ಎಂ. ಸುರೇಶ್, ಗ್ರಾಮಾಂತರ ಘಟಕದ ಅದ್ಯಕ್ಷ ಲಿಂಗರಾಜ ಎಂ.ಪಿ., ರಾಜು ರೋಖಡೆ, ಬಾತಿ ಚಂದ್ರಶೇಖರ, ನಗರಸಭಾ ಮಾಜಿ ಸದಸ್ಯ ಅಟೋ ಹನುಮಂತಪ್ಪ, ಸ್ವಾತಿ ಹನುಮಂತಪ್ಪ, ಮಾಲತೇಶ್ ಭಂಡಾರಿ, ರಾಜೇಶ್ ವರ್ಣೇಕರ್, ಸಂತೋಷ ಗುಡಿಮನಿ, ಮಾರುತಿ ಬಿ., ಜಡಿಯಪ್ಪ, ಸಂತೋಷಿ ಮೊಹಿತೆ, ರೂಪಾ ಕಾಟ್ವೆ, ಅಭಿಮಾನಿಗಳು ಇದ್ದರು.

- - -

-12ಎಚ್.ಆರ್.ಆರ್01: ಹರಿಹರದ ರಾಘವೇಂದ್ರ ಮಠದ ಗೋ ಶಾಲೆಗೆ ಶಾಸಕ ಬಿ.ಪಿ. ಹರೀಶ್ ಹುಟ್ಟುಹಬ್ಬದ ನಿಮಿತ್ತ ಬತ್ತದ ಹುಲ್ಲು ನೀಡಲಾಯಿತು. -12ಎಚ್.ಆರ್.ಆರ್ 1A: ಹರಿಹರದ ರಾಘವೇಂದ್ರ ಮಠದ ಗೋ ಶಾಲೆಗೆ ಶಾಸಕ ಬಿ.ಪಿ. ಹರೀಶ್ ಹುಟ್ಟುಹಬ್ಬದ ನಿಮಿತ್ತ ಮಾಜಿ ಸಂಸದ ಡಾ. ಜಿ.ಎಂ ಸಿದ್ದೇಶ್ವರ್ ಶುಭ ಹಾರೈಸಿದರು.