ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ, ಅದು ನಮ್ಮ ಅಂತರಂಗದ ಸಂಸ್ಕೃತಿ ಮತ್ತು ಚೈತನ್ಯ. ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡವೇ ಪ್ರಾಣ ಮತ್ತು ತಾಣವಾಗಬೇಕು.

ಕನ್ನಡಪ್ರಭ ವಾರ್ತೆ ಮುಂಡರಗಿ

ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ, ಅದು ನಮ್ಮ ಅಂತರಂಗದ ಸಂಸ್ಕೃತಿ ಮತ್ತು ಚೈತನ್ಯ. ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡವೇ ಪ್ರಾಣ ಮತ್ತು ತಾಣವಾಗಬೇಕು ಎಂದು ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರು ನುಡಿದರು.

ಪಟ್ಟಣದ ಜ.ಅ.ವಿ. ವಿದ್ಯಾ ಸಂಸ್ಥೆಯ ಕ.ರಾ. ಬೆಲ್ಲದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಜರುಗಿದ 71ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಹಾಗೂ ಗುರುವಂದನೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಕನ್ನಡ ಎಂಬ ಪದದಲ್ಲಿಯೇ ಅಪಾರ ಅರ್ಥ ಅಡಗಿದೆ. ಕಣ್ಣು ಜ್ಞಾನದ ಸಂಕೇತವಾದರೆ, ಅಡಿ (ಪಾದ) ಕ್ರಿಯಾಶೀಲತೆಯ ಸಂಕೇತ. ಕಣ್ಣಿಂದ ಜ್ಞಾನ ಪಡೆದು, ಅದರಂತೆ ನಡೆದು ತೋರಿಸುವ ಕ್ರಿಯಾಶೀಲತೆಯೇ ಕನ್ನಡ ಸಂಸ್ಕೃತಿಯ ವೈಶಿಷ್ಟ್ಯ. ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸ ಹೊಂದಿದ್ದು, ಪ್ರಾಚೀನ ಲಿಪಿಗಳಲ್ಲೂ ಕನ್ನಡ ಶಬ್ದಗಳ ಬಳಕೆಯಾಗಿದೆ. ಇಂತಹ ಶ್ರೀಮಂತ ಭಾಷೆಯ ಹಿರಿಮೆ-ಗರಿಮೆಯನ್ನು ಯುವ ಪೀಳಿಗೆ ಮನಗಾಣಬೇಕು. ಇಂದು ಭಾರತ ಸರ್ಕಾರ ಕ್ರೀಡೆ ಸೇರಿದಂತೆ ವಿಜ್ಞಾನ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನದತ್ತ ಮುನ್ನುಗ್ಗುತ್ತಿದ್ದು, ಯುವ ಪೀಳಿಗೆ ಇತಿಹಾಸವನ್ನು ಅರಿತು ನಾಡು-ನುಡಿಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದರು.

ಅಳವಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ಹಾವಿನಾಳ ಮಾತನಾಡಿ, ಕರ್ನಾಟಕ ರಾಜ್ಯೋತ್ಸವದ ಇತಿಹಾಸವನ್ನು ತಿಳಿಯಬೇಕಾದರೆ ಮೊದಲು ನಾಡಿನ ಏಕೀಕರಣ ಚಳವಳಿಯ ಮಹತ್ವ ಹಾಗೂ ಅದಕ್ಕಾಗಿ ನಡೆದ ಹೋರಾಟಗಳನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕವಿಗಳು, ಚಲನಚಿತ್ರ ನಟರು, ಸ್ವಾಮೀಜಿಗಳು ನಾಡಿನ ಏಕೀಕರಣಕ್ಕಾಗಿ ಮಹತ್ತರ ಕೊಡುಗೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಳವಳಿ ತೀವ್ರಗೊಂಡಾಗ ಗಡಿಪಾರಾಗಿದ್ದ ಹಲವು ಹೋರಾಟಗಾರರಿಗೆ ಮುಂಡರಗಿಯ ಅನ್ನದಾನೀಶ್ವರ ಮಠವು ಆಶ್ರಯ ನೀಡಿತ್ತು. ಇಂದಿನ ಯುವಪೀಳಿಗೆಗೆ ಏಕೀಕರಣದ ಇತಿಹಾಸ, ಹೋರಾಟಗಾರರ ತ್ಯಾಗದ ಅರಿವಿಲ್ಲ. ಅವರು ಮೊಬೈಲ್ ಬಳಕೆಯಲ್ಲೇ ಕಾಲ ಕಳೆಯುತ್ತಿದ್ದು, ಸಾಹಿತ್ಯ ಹಾಗೂ ಓದಿನ ಹವ್ಯಾಸದಿಂದ ದೂರ ಸರಿಯುತ್ತಿದ್ದಾರೆ. ಯುವಕರು ಪುಸ್ತಕ ಓದುವ ಹಾಗೂ ಕನ್ನಡಾಭಿಮಾನ ಬೆಳೆಸಿಕೊಂಡು, ನಾಡು-ನುಡಿಗೆ ದುಡಿದವರ ತ್ಯಾಗವನ್ನು ಸದಾ ಸ್ಮರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಮೇಲ್ವಿಚಾರಣಾ ಸಮೀತಿ ಅಧ್ಯಕ್ಷ ಪ್ರೊ. ಆರ್. ಎಲ್. ಪೊಲೀಸ್ ಪಾಟೀಲ ಮಾತನಾಡಿ, ಕರ್ನಾಟಕ ರಾಜ್ಯದ ಇತಿಹಾಸ, ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಂಡು, ಮೌಲ್ಯಾಧಾರಿತ ಜೀವನವನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದರು.

ಈ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿನ್ನೆಲೆ ಕಾಲೇಜಿನ ವತಿಯಿಂದ ಜ.ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ಕಾಲೇಜು ಮೇಲ್ವಿಚಾರಣಾ ಸಮಿತಿಯ ಉಪ ಕಾರ್ಯಾಧ್ಯಕ್ಷ ವಿ.ಎಫ್. ಗುಡದಪ್ಪನವರ, ಸದಸ್ಯರಾದ ಪ್ರೊ.ಎಂ.ಜಿ. ಗಚ್ಚಣ್ಣವರ, ಎಸ್.ಜಿ. ಕಡ್ಲಿ, ಟಿ.ಬಿ. ದಂಡಿನ, ಡಾ. ಪ್ರಾ. ಡಾ. ಸಂತೋಷ ಹಿರೇಮಠ ಸೇರಿದಂತೆ ಅನೇಕರಿದ್ದರು.