ಮಾಗಡಿ: ಕನ್ನಡ ಭಾಷೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಪ್ರತಿಯೊಬ್ಬರ ಉಸಿರಲ್ಲೂ ಹಾಸುಹೊಕ್ಕಾಗಿರಬೇಕು. ಜಾಗತಿಕವಾಗಿ ಯಾವುದೇ ಭಾಷೆ ಬೆಳೆದರೂ ತಾಯಿ ಭಾಷೆಯಲ್ಲಿ ಸಿಗುವ ಜ್ಞಾನ ಮತ್ತು ಆತ್ಮೀಯತೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಹೇಳಿದರು

ಮಾಗಡಿ: ಕನ್ನಡ ಭಾಷೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಪ್ರತಿಯೊಬ್ಬರ ಉಸಿರಲ್ಲೂ ಹಾಸುಹೊಕ್ಕಾಗಿರಬೇಕು. ಜಾಗತಿಕವಾಗಿ ಯಾವುದೇ ಭಾಷೆ ಬೆಳೆದರೂ ತಾಯಿ ಭಾಷೆಯಲ್ಲಿ ಸಿಗುವ ಜ್ಞಾನ ಮತ್ತು ಆತ್ಮೀಯತೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹಾಗೂ ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆ ಸೂರ್ಯ-ಚಂದ್ರರಿರುವವರೆಗೂ ಅಜರಾಮರವಾಗಿ ಉಳಿಯಬೇಕು ಎಂದು ಹೇಳಿದರು.

ಕೆಂಪೇಗೌಡ ಜಯಂತಿ:

ಪ್ರತಿವರ್ಷ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಮಾಗಡಿ ಕೋಟೆ ಮೈದಾನದಲ್ಲಿ ಅಧಿಕೃತವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಬೇಕು ಎಂಬುದು ತಾಲೂಕಿನ ಜನರ ಹಕ್ಕೊತ್ತಾಯ. ಈ ನಿಟ್ಟಿನಲ್ಲಿ ಸಚಿವ ಬಾಲಕೃಷ್ಣ ಅವರು ಸರ್ಕಾರದ ಗಮನ ಸೆಳೆದು, ಅಧಿಕೃತ ಅನುಮೋದನೆ ಕೊಡಿಸುವುದಾಗಿ ಭರವಸೆ ನೀಡಿದರು. ಬಿಇಒ ರಾಜೇಗೌಡ ಮಾತನಾಡಿ, ಜ್ಞಾನಾರ್ಜನೆಗಾಗಿ ಯಾವುದೇ ಭಾಷೆ ಕಲಿತರೂ ತಾಯ್ನುಡಿ ಕನ್ನಡ ಸುಲಿದ ಬಾಳೆ ಹಣ್ಣಿನಂತೆ ಅತ್ಯಂತ ಸುಲಭ ಮತ್ತು ಸುಂದರ. ಪ್ರತಿಯೊಬ್ಬರು ಭಾಷೆಯನ್ನು ಉಳಿಸಿಬೆಳೆಸಲು ಸಹಕರಿಸಬೇಕು ಎಂದರು.

ತಾಲೂಕು ಕಸಾಪ ಅಧ್ಯಕ್ಷ ತಿ.ನಾ. ಪದ್ಮನಾಭ ಮಾತನಾಡಿ, ಕನ್ನಡ ಕೇವಲ ಮಾತೃಭಾಷೆಯಲ್ಲ, ಅದು ನಮ್ಮ ಜೀವ-ದೇವ-ಶಕ್ತಿ ಕಣ. ನಾಡಿನ ವನ್ಯಜೀವಿಗಳೇ ಕನ್ನಡಕ್ಕೆ ಸ್ಪಂದಿಸುವಾಗ ನಾವೆಲ್ಲರೂ ಕನ್ನಡವನ್ನು ಉಳಿಸಿ-ಬೆಳೆಸುವ ಹೊಣೆ ಹೊರಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ತಾಲೂಕು ಮಟ್ಟದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಂಜಿತ್ ಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎನ್. ಜಯರಾಮ್, ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ಸಿ. ಜಯರಾಮ್, ಗಂಗಾಮಣಿ, ಮಾಂತೇಶ್ ಗೌಡ, ಶಿವಕುಮಾರ್, ಜಯಮ್ಮ, ಬಸವಣ್ಣ ಇತರರು ಉಪಸ್ಥಿತರಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.