ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕೊಡವಾಮೆಯ ಹಿರಿಮೆಗೆ ಮಹಿಳೆಯರ ಪಾತ್ರ ಬಹುಮುಖ್ಯ. ಉಡುಗೆ-ತೊಡುಗೆಯ ಜೊತೆಗೆ ಮನೆಯಲ್ಲಿ ಕೊಡವ ಭಾಷೆ, ಸಂಸ್ಕೃತಿಯನ್ನು ಉತ್ತಮ ಸಂಸ್ಕಾರದೊಂದಿಗೆ ಬೆಳೆಸುವ ಮಹತ್ತರವಾದ ಜವಾಬ್ದಾರಿ ಮಹಿಳೆಯರದ್ದಾಗಬೇಕು. ಮನೆಯಲ್ಲಿ ಒಳ್ಳೆಯ ವಿಚಾರ, ಒಳ್ಳೆಯ ವಾತಾವರಣವನ್ನು ಕಾಯ್ದುಕೊಳ್ಳುವುದು ಸ್ತ್ರೀಯರ ಕೈಯಲ್ಲಿದೆ. ಅಂತಹ ಮನೆಯಲ್ಲಿ ಕೊಡವಾಮೆ, ಕೊಡವ ಸಂಸ್ಕೃತಿ ಹಾಗೂ ಕೊಡವ ಸಂಸ್ಕಾರವು ತಣ್ಣನೆ ಬೆಳಗುತ್ತದೆ ಎಂದು ಕರ್ನಾಟಕ ಕೊಡವ ಸಾಹಿತ್ಯಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಭಿಪ್ರಾಯಪಟ್ಟರು.ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನಿಂದ ಆಯೋಜಿಸಿದ ‘ಕಕ್ಕಡ ನಮ್ಮೆ’ ಆಚರಣೆ ಹಾಗೂ ಅಕಾಡೆಮಿಯ 16ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಜಂಟಿ ಕಾರ್ಯಕ್ರಮದಲ್ಲಿ ಪತ್ತಾಯ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಬಹುತೇಕ ಸಂಘ-ಸಂಸ್ಥೆ, ಸಮಾಜಗಳ ವ್ಯಾಪ್ತಿಯಲ್ಲಿ ಮಹಿಳೆಯ ಸಂಘಟನೆಗೆ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಸಂಘಟನೆಗಳಲ್ಲಿ ಸಂಸ್ಕೃತಿ-ಸಂಸ್ಕಾರಗಳ ಬಗ್ಗೆ ಹೆಚ್ಚಿನ ಆದ್ಯತೆಯ ಮೇರೆಗೆ ತಿಳುವಳಿಕೆ ನೀಡುವಂತಾಗಬೇಕು. ಪ್ರತಿಯೊಬ್ಬರ ಮನೆ-ಮನಗಳಲ್ಲಿ ಹಿಂದಿನ ಕಾಲದ ಕೊಡವ ಆತಿಥ್ಯದ ಗತ ವೈಭವ ಮರುಕಳುಹಿಸುವಂತಾಗಬೇಕು. ಕೊಡಗಿನ ನೆಲದಲ್ಲಿ ‘ಅತಿಥಿ ದೇವೋ ಭವ’ ಎಂಬುವುದು ಕೊಡವ ಸ್ತ್ರೀಯರ ಸಂಸ್ಕಾರದಿಂದ ಹುಟ್ಟಿ ಬಂದಂತಹ ಸಂಸ್ಕೃತಿ ಎಂದು ಉಲ್ಲೇಖಿಸಿ ಮಹೇಶ್ ನಾಚಯ್ಯ, ಇಂತಹ ಸುಸಂಸ್ಕೃತಿ ಮರುಕಳುಹಿಸುವಲ್ಲಿ ಸ್ತ್ರೀ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕು ಎಂದರು.ಪೊಮ್ಮಕ್ಕಡ ಪರಿಷತ್ತಿನ ಅಧ್ಯಕ್ಷೆ ತಮ್ಮಐಚಂಡ ರಶ್ಮಿ ಮೇದಪ್ಪ ಪ್ರಾಸ್ತಾವಿಕ ನುಡಿಗಳಲ್ಲಿ, ಮನೆ ಮನೆಗಳಲ್ಲಿ ಜ್ಞಾನದ ಬೆಳಕು ಹರಿಯಬೇಕೆಂದರೆ ಓದುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಪುಸ್ತಕ ಓದುವುದರಿಂದ ಜ್ಞಾನಾರ್ಜನೆಯೊಂದಿಗೆ ಸಾಹಿತ್ಯ ಚಿಂತನೆಗೆ ಕಾರಣವಾಗುತ್ತದೆ. ಕೊಡವ ಪುಸ್ತಕ ಪತ್ತಾಯದಂತಹ ಕಾರ್ಯಕ್ರಮದಿಂದ ನಾಡಿನಾದ್ಯಂತ ಓದುವ ಹವ್ಯಾಸ ವೃದ್ಧಿಸುವುದ ಮೂಲಕ ಕೊಡವ ಸಾಹಿತ್ಯ ಬೆಳೆಯಲಿ ಎಂದು ಆಶಿಸಿದರು.ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ, ಕೊಡವಾಮೆಯ ಮೂಲ ಕೃಷಿ. ಪ್ರಸ್ತುತ ಕೃಷಿಯಿಂದ ಧನ ಲಾಭದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಸಂಸ್ಕೃತಿ ವಂತಿಕೆ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಕೃಷಿಗೆ ಆದ್ಯತೆ ನೀಡುವಂತಾಗಬೇಕು. ಕೊಡವ ಅಕಾಡೆಮಿಯಂತಹ ಘನತೆವೆತ್ತ ಸರ್ಕಾರಿ ಸಂಸ್ಥೆಯ ಮೂಲಕ ಗದ್ದೆ ಕೃಷಿಗೆ ರಾಜ್ಯ ಸರ್ಕಾರ ಧನಸಹಾಯ ನೀಡಿ ಸಹಕರಿಸುವಂತೆ ಮನವಿ ಮಾಡಲು ಕೇಳಿಕೊಂಡರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಪುಸ್ತಕ ಪತ್ತಾಯ ದಾನಿಗಳಾದ ಕೊಡಗು ಎಜುಕೇಶನ್ ಮತ್ತು ಸೋಷಿಯಲ್ ಟ್ರಸ್ಟ್ನ ಮಾರ್ಚಂಡ ಗಣೇಶ್ ಪೊನ್ನಪ್ಪ ಹಾಗೂ ನಿವೃತ್ತ ಶಿಕ್ಷಕಿ, ಪೊಮ್ಮಕ್ಕಡ ಪರಿಷತ್ ನಿರ್ದೇಶಕಿ ಮಳವಂಡ ಪೂವಮ್ಮ ಮಾತನಾಡಿದರು.