ಸಾರಾಂಶ
ಸಂಸ್ಕೃತಿ, ಸಂಸ್ಕಾರಗಳಿಂದ ಕೂಡಿದ ಬದುಕು ನಮ್ಮದಾಗಬೇಕು. ಅಂತಹ ಸಂಸ್ಕೃತಿ, ಸಂಸ್ಕಾರದ ಜತೆಗೆ ಮಹಿಳೆಯರನ್ನು ಸಂಘಟಿಸುವ ಮಹತ್ಕಾರ್ಯ ಯೋಜನೆ ಮಾಡುತ್ತಿರುವುದು ಶ್ಲಾಘನೀಯ; ತಹಸೀಲ್ದಾರ್ ಎಂ.ಗುರುರಾಜ
ಯಲ್ಲಾಪುರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರನ್ನು ಸಂಘಟಿತರಾಗಿಸುವಲ್ಲಿ ಹಾಗೂ ಸ್ವಾವಲಂಬಿಯಾಗಿಸುವಲ್ಲಿ ಶ್ರಮಿಸುತ್ತಿದೆ ಎಂದು ತಹಸೀಲ್ದಾರ್ ಎಂ.ಗುರುರಾಜ ಹೇಳಿದರು.ಅವರು ಪಟ್ಟಣದ ಅಡಕೆ ಭವನದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದ ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿ, ಸಂಸ್ಕಾರಗಳಿಂದ ಕೂಡಿದ ಬದುಕು ನಮ್ಮದಾಗಬೇಕು. ಅಂತಹ ಸಂಸ್ಕೃತಿ, ಸಂಸ್ಕಾರದ ಜತೆಗೆ ಮಹಿಳೆಯರನ್ನು ಸಂಘಟಿಸುವ ಮಹತ್ಕಾರ್ಯ ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.ಸಂಪನ್ಮೂಲ ವ್ಯಕ್ತಿಯಾಗಿದ್ದ ವಿಶ್ವ ಮಾನವ ಹಕ್ಕು ಆಯೋಗದ ಆರ್.ಕೆ. ಫೌಂಡೇಶನ್ ಜಿಲ್ಲಾಧ್ಯಕ್ಷೆ ಅರ್ಚನಾ ನಾಯಕ ಮಾತನಾಡಿ, ಮಹಿಳೆಯರಿಗೆ ಎಲ್ಲೇ ಅನ್ಯಾಯವಾದರೂ ಕಾನೂನಾತ್ಮಕವಾಗಿ ನ್ಯಾಯ ದೊರಕಿಸಿಕೊಡಲು ನಮ್ಮ ತಂಡ ಶ್ರಮಿಸುತ್ತಿದೆ. ಮಹಿಳೆಯರು ಕಾನೂನಿನ ಕುರಿತು ಸರಿಯಾದ ತಿಳಿವಳಿಕೆ ಹೊಂದಬೇಕು. ಮಹಿಳೆಯರು ಒಗ್ಗಟ್ಟಾದಾಗ ಮಾತ್ರ ಸಮಾಜದಲ್ಲಿ ಗೌರವಯುತ ಬದುಕು ಸಾಗಿಸಲು ಸಾಧ್ಯ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಯೋಜನೆಯಿಂದ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಇಂದೂರು ಆರ್.ಕೆ.ಎನ್ ಕಾನ್ವೆಂಟ್ ಸ್ಕೂಲ್ ಮುಖ್ಯಾಧ್ಯಾಪಕಿ ಸಿಂಧು ನಾಯರ್ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರದ ಕುರಿತು ಮಾತನಾಡಿದರು. ಪಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆ ವಹಿಸಿದ್ದರು.ಸಿಪಿಐ ರಂಗನಾಥ ನೀಲಮ್ಮನವರ್, ತಾಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಪಿಎಸ್ಐ ನಸ್ರೀನ್ ತಾಜ್ ಚಟ್ಟರಕಿ, ನೇತ್ರ ತಜ್ಞೆ ಡಾ. ಸೌಮ್ಯಾ ಕೆ.ವಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬಸವರಾಜ ನಡುವಿನಮನಿ,ಯೋಜನಾಧಿಕಾರಿ ಹನುಮಂತ ನಾಯ್ಕ ಉಪಸ್ಥಿತರಿದ್ದರು. ವೆಂಕಟೇಶ ಗೌಡ ನಿರ್ವಹಿಸಿದರು.
ಕಾರ್ಯಕ್ರಮದ ಪ್ರಯುಕ್ತ ಪುಷ್ಪಗುಚ್ಛ ಸ್ಪರ್ಧೆ, ಆರತಿ ತಟ್ಟೆ ಸ್ಪರ್ಧೆ, ಸ್ವ ಉದ್ಯೋಗ ಮಳಿಗೆ ಪ್ರದರ್ಶನ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿತ್ತು.