ಸಾರಾಂಶ
ಹುಬ್ಬಳ್ಳಿ: ಈ ಬಾರಿ ಹೋಳಿ ಹುಣ್ಣಿಮೆ, ರಂಜಾನ್ ಹಬ್ಬಗಳು ಏಕಕಾಲಕ್ಕೆ ಬಂದ ಹಿನ್ನೆಲೆಯಲ್ಲಿ ಬುಧವಾರ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ರಾಜ್ಯ ಪೊಲೀಸ್, ಹು-ಧಾ ಪೊಲೀಸ್ ಕಮೀಷನರೇಟ್ ವತಿಯಿಂದ ಸೌಹಾರ್ದ ಸಭೆ ಹಮ್ಮಿಕೊಳ್ಳಲಾಯಿತು.
ಈ ಸಭೆಯಲ್ಲಿ ಪಾಲ್ಗೊಂಡ ಸರ್ವಧರ್ಮ ಗುರುಗಳು, ಮುಖಂಡರು ಎರಡೂ ಹಬ್ಬಗಳನ್ನು ಎಲ್ಲ ಸಮಾಜ ಬಾಂಧವರು ಸೇರಿ ಸೌಹಾರ್ದದಿಂದ ಆಚರಿಸುವ ನಿರ್ಣಯ ಕೈಗೊಂಡರು.ದೀಪಹಚ್ಚುವ ಕೆಲಸ ಮಾಡಿ
ಈ ವೇಳೆ ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಸೌಹಾರ್ದ ಬರಬೇಕಾದರೆ ವಿಶಾಲವಾದ ಮನಸ್ಸು, ಸಂಸ್ಕಾರ ಬೇಕು. ಸೌಹಾರ್ದತೆ ಇದ್ದಾಗ ಶಾಂತಿ ನೆಲೆಸುತ್ತದೆ. ಜಗತ್ತು ಹಾತೊರೆಯುತ್ತಿರುವುದು ಅದಕ್ಕಾಗಿಯೇ. ಧರ್ಮಗುರುಗಳಾದವರು ದೀಪ ಹಚ್ಚುವ ಕೆಲಸ ಮಾಡಬೇಕೇ ವಿನಃ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಬೆಂಕಿ ವಿನಾಶಕಾರಿ, ದೀಪ ಶಾಂತಿಯ ಸಂಕೇತ. ಈ ಸೌಹಾರ್ದ ಎಂಬ ಜ್ಯೋತಿ ಎಂದಿಗೂ ನಂದಬಾರದು. ಹಬ್ಬಗಳಿಂದ ಸಂತೋಷ ಸಿಗಬೇಕು, ಸೌಹಾರ್ದವೇ ಹೋಳಿಯ ರಂಗಾಗಬೇಕು ಎಂದು ಕರೆ ನೀಡಿದರು.ಪ್ರೀತಿ ಹಂಚುವ ಕಾರ್ಯವಾಗಲಿ
ಮುಸ್ಲಿಂ ಧರ್ಮಗುರು ತಾಜುದ್ದೀನ್ ಖಾದ್ರಿ, ಪ್ರೀತಿ ಸೌಹಾರ್ದದಿಂದ ಎಲ್ಲರೂ ಸೇರಿ ಹಬ್ಬ ಆಚರಿಸೋಣ. ಹಬ್ಬದ ವ್ಯಾಖ್ಯಾನವೇ ಸಂಭ್ರಮ ಮತ್ತು ಶಾಂತಿಯಾಗಿದೆ. ಯಾವುದೇ ಧರ್ಮಕ್ಕೆ ತೊಂದರೆಯಾಗದಂತೆ ಹಬ್ಬ ಆಚರಿಸುವಂತಾಗಲಿ. ಮರಣಾ ನಂತರ ನಾವು ಏನನ್ನೂ ತಗೆದುಕೊಂಡು ಹೋಗುವುದಿಲ್ಲ ಎಂಬ ಅರಿವಿರಲಿ. ಇದ್ದಾಗ ಎಲ್ಲರೊಂದಿಗೆ ಬೆರೆತು ಪರಸ್ಪರ ಪ್ರೀತಿ ಹಂಚುವ ಕಾರ್ಯ ಮಾಡೋಣ ಎಂದರು.ಮಾನವೀಯತೆಗೆ ಪ್ರಾಮುಖ್ಯತೆ ನೀಡಿ
ಕ್ರಿಶ್ಚಿಯನ್ ಧರ್ಮಗುರು ಫಾದರ್ ಸುಧೀರ್ ಮಾತನಾಡಿ, ಪ್ರತಿವರ್ಷ ಹೋಳಿ, ರಂಜಾನ್ ಒಟ್ಟಿಗೆ ಬರುತ್ತವೆ. ಈ ಹಬ್ಬವನ್ನು ಜತೆಯಾಗಿ ಆಚರಿಸಿದಾಗ ಮಾತ್ರ ಸೌಹಾರ್ದ ಕಾಣಲು ಸಾಧ್ಯ. ಇಂದು ಮಾನವೀಯತೆ ಮರೆತು ಧರ್ಮಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಕಾಲ ಕೆಟ್ಟಿಲ್ಲ, ನಾವು ಕೆಟ್ಟಿದ್ದೇವೆ. ಧರ್ಮಗಳು ಒಳ್ಳೆಯದಕ್ಕೆ ಹಾದಿ ತೋರಿಸಲು ಬಳಕೆಯಾಗಲಿ. ಆಗ ಮಾತ್ರ ಸೌಹಾರ್ದ ಸಭೆಗೆ ಅರ್ಥ ಸಿಗುತ್ತದೆ ಎಂದರು.ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಹೋಳಿ, ರಂಜಾನ್ ಹಬ್ಬ ಜತೆಯಾಗಿ ಬಂದಿದೆ. ಎರಡೂ ಹಬ್ಬಗಳು ಸೌಹಾರ್ದದಿಂದ ನಡೆಯಲಿದೆ. ಯಾವುದೇ ಧಾರ್ಮಿಕ ಆಚರಣೆ ಇನ್ನೊಬ್ಬರಿಗೆ ಸಮಸ್ಯೆಯಾಗುತ್ತದೆ ಎಂದರೆ ಅದನ್ನು ನಿಲ್ಲಿಸಬೇಕು. ಬಲವಂತವಾಗಿ ಯಾರಿಗೂ ಬಣ್ಣ ಹಚ್ಚಬಾರದು. ಎಲ್ಲ ಧರ್ಮದವರು ಬಂದು ಹಬ್ಬ ಆಚರಿಸುವಂತಾಗಬೇಕು ಎಂದರು.
ಭಾವೈಕ್ಯತೆಗೆ ಹುಬ್ಬಳ್ಳಿ ಸಾಕ್ಷಿಯಾಗಲಿನಾನು ಅಧಿಕಾರ ವಹಿಸಿದ ಮೂರು ತಿಂಗಳಲ್ಲಿ ಗಣೇಶೋತ್ಸವ, ಈದ್‌ಮಿಲಾದ್ ಹಬ್ಬದ ಸಂದರ್ಭದಲ್ಲಿ ಮಹಾನಗರದ ಜನತೆ ಸೌಹಾರ್ದದಿಂದ ಆಚರಿಸಿರುವುದು ಸಂತಸ ತಂದಿದೆ. ಮಸೀದಿ ಎದುರು ಗಣೇಶ ಮೆರವಣಿಗೆ ಬಂದಾಗ ಸೂಫಿ ಹಾಡು ಹಾಕಿ ಭಾವೈಕ್ಯ ಮೆರೆದಿದ್ದರು. ಹಾಗೆಯೇ ಈದಮಿಲಾದ್ ಮೆರವಣಿಗೆ ಸಂದರ್ಭ ದುರ್ಗದಬೈಲ್‌ನಲ್ಲಿ ಗಣೇಶ ಹಾಡು ಹಾಕಿ ಭಾವೈಕ್ಯ ಮೆರೆದರು. ಇದೇ ರೀತಿಯ ಭಾವೈಕ್ಯತೆ ಸದಾಕಾಲ ಮುಂದುವರೆಯಲಿ ಎಂದರು.
ಸಿಖ್ ಧರ್ಮಗುರು ಜ್ಞಾನಿ ಗುಣವಂತಸಿಂಗ್ ಮಾತನಾಡಿ, ಸರ್ವರೂ ಸೇರಿ ಎಲ್ಲ ಹಬ್ಬಗಳನ್ನು ಶಾಂತಿ, ಸೌಹಾರ್ದದಿಂದ ಆಚರಿಸೋಣ. ಇದಕ್ಕೆ ಎಲ್ಲ ಸಮಾಜ ಬಾಂಧವರು ಕೈಜೋಡಿಸುವಂತೆ ಕರೆ ನೀಡಿದರು.ಈ ವೇಳೆ ಮೋಹನ ಹಿರೇಮನಿ, ಪರಶುರಾಮ ನಂದ್ಯಾಳ, ರಾಜಶೇಖರ, ಅನ್ವರ ಮುಲ್ಲಾ ಸೇರಿದಂತೆ ಹಲವರು ಅನಿಸಿಕೆ ವ್ಯಕ್ತಪಡಿಸಿದರು. ಮಾಜಿ ಶಾಸಕ, ಎಸ್‌ಎಸ್‌ಕೆ ಸಮಾಜದ ಮುಖಂಡ ಅಶೋಕ ಕಾಟವೆ, ಹಿರಿಯ ನಾಗರಿಕ ಮಲ್ಲೇಶಪ್ಪ ಹೆಬಸೂರ, ವಿವಿಧ ಸಮಾಜದ ಮುಖಂಡರಾದ ಮಹೇಂದ್ರ ಸಿಂಘಿ, ಮಹ್ಮದ ಹಾಸಿಮ್ ಹಿಂಡಸಗೇರಿ, ಲೋಚನೇಶ ಹೂಗಾರ, ಶಹರ ತಹಸೀಲ್ದಾರ್ ಕಲಗೌಡ ಪಾಟೀಲ, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್, ಸೇರಿದಂತೆ ಹಲವರಿದ್ದರು.