ಅನ್ನಕ್ಕೆ, ಬಟ್ಟೆಗೆ ಬಡತನ ಇರಬಹುದು. ಆದರೆ ದೇವರು ಕೊಟ್ಟಿರುವ ಕಣ್ಣು, ಬುದ್ಧಿ, ಒಳಗಿರುವ ಶಕ್ತಿ, ವಿಶ್ವಾಸವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವ ಮೂಲಕ ಮಹಾಂತೇಶ ಬೀಳಗಿ ಬದುಕಿನಲ್ಲಿ ಯಶಸ್ಸು ಸಾಧಿಸಿದ್ದರು ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ತಿಳಿಸಿದರು.
ಮುಂಡರಗಿ: ಬಡತನ ಶಾಪವಲ್ಲ. ಅದಕ್ಕೆ ನಿದರ್ಶನ ಮಹಾಂತೇಶ ಬೀಳಗಿ. ಮನುಷ್ಯನಿಗೆ ಬಡತನ ಬರಲಿ. ಆದರೆ ಬುದ್ಧಿಗೆ ಎಂದಿಗೂ ಬಡತನ ಬರಬಾರದು ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ತಿಳಿಸಿದರು.
ಗುರುವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಜರುಗಿದ 61ನೇ ತ್ರೈಮಾಸಿಕ ಶಿವಾನುಭವ, ಕಾರ್ತಿಕೋತ್ಸವ ಮಂಗಲೋತ್ಸವ, ಮಹಾಂತೇಶ ಬೀಳಗಿ ನುಡಿನಮನ ಹಾಗೂ ಸಾಧಕರಿಗೆ ಗೌರವ ಸತ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮಹಾಂತೇಶ ಬೀಳಗಿ ಅವರು ತಮ್ಮ ವೃತ್ತಿಯಲ್ಲಿ ಅತ್ಯಂತ ಶ್ರದ್ಧೆಯಿಂದ ಬದುಕಿದ್ದರು. ಆತ್ಮ, ಪರಮಾತ್ಮ, ಆತ್ಮ ಪರಮಾತ್ಮನತ್ತ ಸೇರಬೇಕು ಎನ್ನುವ ಗೊಡ್ಡು ಸಂಪ್ರದಾಯದಲ್ಲಿ ಅವರು ಬಂದವರಲ್ಲ. ಹೀಗಾಗಿ ಅವರಿಗೆ ಈ ಮೂಲಕ ನಾವು ಶ್ರದ್ಧಾಂಜಲಿ ಸಲ್ಲಿಸೋಣ ಎಂದರು.
ಅನ್ನಕ್ಕೆ, ಬಟ್ಟೆಗೆ ಬಡತನ ಇರಬಹುದು. ಆದರೆ ದೇವರು ಕೊಟ್ಟಿರುವ ಕಣ್ಣು, ಬುದ್ಧಿ, ಒಳಗಿರುವ ಶಕ್ತಿ, ವಿಶ್ವಾಸವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವ ಮೂಲಕ ಮಹಾಂತೇಶ ಬೀಳಗಿ ಬದುಕಿನಲ್ಲಿ ಯಶಸ್ಸು ಸಾಧಿಸಿದ್ದರು. ಬೀಳಗಿಯವರ ಕುರಿತು ಡಾ. ನಿಂಗು ಸೊಲಗಿ, ವಿಜಯಾನಂದ ದೊಡ್ಡವಾಡ ಅವರು ಒಂದು ಅತ್ಯುತ್ತಮವಾದ ಕೃತಿಯನ್ನು ಹೊರತರಬೇಕು. ಅದನ್ನು ಶ್ರೀಮಠದಿಂದ ಬಿಡುಗಡೆಗೊಳಿಸಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.ಧಾರವಾಡದ ವಿಜಯಾನಂದ ದೊಡ್ಜವಾಡ ಮಾತನಾಡಿ, ಮಹಾಂತೇಶ ಬೀಳಗಿಯವರಿಗೆ ಊಟಕ್ಕೆ, ಬಟ್ಟೆಗೆ ಬಡತನವಿತ್ತು. ಆದರೆ ಬುದ್ಧಿಗೆ ಬಡತನವಿರಲಿಲ್ಲ. ಅದನ್ನು ಬೀಳಗಿಯವರು ಸರಿಯಾಗಿ ಬಳಸಿಕೊಂಡು ಉನ್ನತ ಮಟ್ಟಕ್ಕೇರಿದ್ದರು. ಅವರಲ್ಲಿ ರಾಷ್ಟ್ರಪ್ರಜ್ಞೆಯ ಮನೋಭಾವ ಇತ್ತು ಎಂದರು.
ಪಟ್ಟಣದ ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಂಜುನಾಥ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗಣ್ಯ ವರ್ತಕ ಪ್ರಶಸ್ತಿ ಪುರಸ್ಕೃತ ಕಾಶೀನಾಥ ಅಳವಂಡಿಯವರಿಗೆ, ಡಿ.ಎಸ್. ಕರ್ಕಿ ಪ್ರಶಸ್ತಿ ಪುರಸ್ಕೃತ ಸಂತೋಷ ಅಂಗಡಿ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಸಂತೋಷಕುಮಾರ ಮುರುಡಿ, ಮಹಾಲಿಂಗಯ್ಯ ಹಿರೇಮಠ, ಅಭಿನಯರತ್ನ ಪ್ರಶಸ್ತಿ ವಿಜೇತ ಮಹಾಂತೇಶ ತ್ಯಾಮನವರ, ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟು ಪಾಲಕರಿಗೆ ಹಾಗೂ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಅನ್ನದಾನೀಶ್ವರ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಗೌರವ ಸತ್ಕಾರ ಜರುಗಿತು.ರಾಮೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಾ ತ್ಯಾಪಿ ಧರ್ಮಗ್ರಂಥ ಪಠಣ, ಕು. ಯಲ್ಲಮ್ಮ ಜಂಭಗಿ ವಚನ ಚಿಂತನ ಮಾಡಿದರು. ಜಯಶ್ರೀ ಅಳವಂಡಿ ಸಂಗೀತ ಸೇವೆ ನೆರವೇರಿಸಿದರು. ಶಿವಕುಮಾರ ಕುಬಸದ ಅವರಿಗೆ ತಬಲಾ ಸಾಥ್ ನೀಡಿದರು. ಪಟ್ಟಣದ ವರ್ತಕ ಜಗದೀಶ ಕಲ್ಯಾಣಿ ಹಾಗೂ ಕುಟುಂಬ ವರ್ಗದವರು ಶಿವಾನುಭವ ಕಾರ್ಯಕ್ರಮದ ಭಕ್ತಿಸೇವೆ ವಹಿಸಿಕೊಂಡಿದ್ದರು. ಅವರನ್ನು ಶ್ರೀಗಳು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಬಸಯ್ಯ ಗಿಂಡಿಮಠ, ಎಸ್.ಎಸ್. ಗಡ್ಡದ, ಎಚ್. ವಿರುಪಾಕ್ಷಗೌಡ, ಈಶಣ್ಣ ಬೆಟಗೇರಿ, ಡಾ. ನಿಂಗು ಸೊಲಗಿ, ಪಾಲಾಕ್ಷಿ ಗಣದಿನ್ನಿ, ದೇವಪ್ಪ ರಾಮೇನಹಳ್ಳಿ, ಬಿ.ವಿ. ಮುದ್ದಿ, ಶರಣಪ್ಪ ಕುಬಸದ, ಸುರೇಶ ಬಣಗಾರ, ಪವನ್ ಚೋಪ್ರಾ, ಶಿವಕುಮಾರ ಬೆಟಗೇರಿ, ಸದಾಶಿವಯ್ಯ ಕಬ್ಬೂರಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ಸ್ವಾಗತಿಸಿ, ಡಾ. ನಿಂಗು ಸೊಲಗಿ ಸನ್ಮಾನಿತರ ಪರಿಚಯಿಸಿದರು. ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿದರು.