ಗದಗ ನಗರದ ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಇ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬ್ಯಾಕ್ ಟು ಬೆಂಚಸ್ ಕಾರ್ಯಕ್ರಮವನ್ನು ವಿಪ ಸದಸ್ಯ ಎಸ್.ವಿ. ಸಂಕನೂರ ಉದ್ಘಾಟಿಸಿದರು.

ಗದಗ: ನಗರದ ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಇ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬ್ಯಾಕ್ ಟು ಬೆಂಚಸ್ ಕಾರ್ಯಕ್ರಮವನ್ನು ವಿಪ ಸದಸ್ಯ ಎಸ್.ವಿ. ಸಂಕನೂರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಶಾಲೆ ಪ್ರಾರಂಭವಾಗಿ 25 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ರಜತ ಮಹೋತ್ಸವದ ಅಂಗವಾಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರಚನೆಯಾಗಿದ್ದು ನನಗೆ ಸಂತೋಷ ತಂದಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಸದಾ ಶಾಲೆಯೊಂದಿಗೆ ಉತ್ತಮವಾದ ಸಂಬಂಧ ಹೊಂದಿರುವುದು ಒಳ್ಳೆಯದು ಎಂದರು.

ಶಾಲೆಯ ಮೊಟ್ಟಮೊದಲ ಮುಖ್ಯೋಪಾಧ್ಯಾಯ ಎಸ್.ಟಿ. ಪಾಟೀಲ ಮಾತನಾಡಿ, ಶಾಲೆಯ ಆರಂಭಿಕ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಚೆನ್ನಯ್ಯ ಹಿರೇಮಠ ಮಾತನಾಡಿ, ಸಪ್ತಋಷಿಗಳು ಶ್ರಮದ ಫಲವಾಗಿ ತಲೆಯೆತ್ತಿದ ಕೆಎಲ್‌ಇ ಸಂಸ್ಥೆಯ ಅಂಗ ಸಂಸ್ಥೆಯಾಗಿ ಬೆಳೆದು ಹೆಮ್ಮರವಾಗಿ, ರಜತ ಮಹೋತ್ಸವದ ಪ್ರಯುಕ್ತ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರಚನೆಯಾಗಿದ್ದು, ವಿದ್ಯಾರ್ಥಿಗಳ ಸಂಘಟನೆಯ ಸಹಕಾರದಿಂದ ಶಾಲೆಯು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಅಪಾರ ಸಾಧನೆಗೈದಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಚಾರ್ಯೆ ಕಲ್ಪನಾ ಚಚಡಿ, ಶಾಲೆಯ ಬೆಳವಣಿಗೆಗೆ ಸಹಾಯ-ಸಹಕಾರ ನೀಡಿದ ಸರ್ವ ಮಹನೀಯರನ್ನು ಸ್ಮರಿಸಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಹಾಗೂ ಸರ್ಕಾರಿ ಸೇವೆಗೆ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯದರ್ಶಿ ಶಶಾಂಕ ಗಜಕೋಶ, ಸಹ ಕಾರ್ಯದರ್ಶಿ ಜಾಫರ್ ಸಾದಿಕ್ ಹೊಂಬಳ ಹಾಜರಿದ್ದರು.