ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ವಿದ್ಯೆ ಮತ್ತು ವಿದ್ವತ್ತು ಎರಡು ಭಿನ್ನವಾಗಿವೆ. ವಿದ್ಯೆ ಎಂಬುದು ಜ್ಞಾನಾರ್ಜನೆ, ಕಲಿಕೆಯ ಭಾಗವಾದರೆ, ವಿದ್ವತ್ತು ವಿಮರ್ಶಾತ್ಮಕವಾದ ಮತ್ತು ತಾರ್ಕಿಕ ಅಲೋಚನಾ ಕ್ರಮವನ್ನು ರೂಢಿಸುತ್ತದೆ ಎಂದು ಸಿದ್ಧನಮಠದ ಜನಪದ ಕಲಾವಿದ ಯುಗಧರ್ಮ ರಾಮಣ್ಣ ನುಡಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ಸ್ಕೌಟ್ ಮತ್ತು ಗೈಡ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಮ, ಕ್ರಮ, ಪರಿಶ್ರಮ, ಪರಾಕ್ರಮ ಮತ್ತು ವಿಕ್ರಮ ಎಂಬ ಯುಗಧರ್ಮದ ತತ್ವಗಳನ್ನು ವಿದ್ಯಾರ್ಥಿ ದೆಸೆಯಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಿ. ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಿ. ರೋಗ ಪೀಡಿತ ಜನತೆ ದೇಶಕ್ಕೆ ಮಾರಕ. ರಸ್ತೆ ಬದಿಯ ಆಹಾರವನ್ನು ಸೇವಿಸುವುದು ಉತ್ತಮವಲ್ಲ ಎಂದು ವಿದ್ಯಾರ್ಥಿಗಳಿಗೆ ವಚನ ಮತ್ತು ಗೀತೆಗಳನ್ನು ಹಾಡುವ ಮೂಲಕ ಮನವರಿಕೆ ಮಾಡಿದರು.ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಇಂದಿನ ಯುವಜನತೆ ಮೊಬೈಲ್ ಫೋನ್ ಬಳಕೆಯನ್ನು ಕಡಿಮೆ ಮಾಡಿ ದೈಹಿಕ ಶ್ರಮಕ್ಕೆ ಆದ್ಯತೆ ನೀಡಬೇಕು. ಪೋಷಕರೇ ಮಕ್ಕಳಿಗೆ ಮೊಬೈಲ್ ಗೀಳು ಹಚ್ಚಿಸುತ್ತಿರುವುದು, ಅನಾರೋಗ್ಯ ಸಮಾಜದ ನಿರ್ಮಾಣಕ್ಕೆ ನಾಂದಿ ಎಂದು ಬೇಸರ ವ್ಯಕ್ತ ಪಡಿದಿದರು.
ಭಾರತವು ವಿಜ್ಞಾನ ಮತ್ತು ಅವಿಷ್ಕಾರಗಳ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಯುವಜನತೆ ಇದರ ಸದುಪಯೋಗ ಪಡಿಸಿಕೊಂಡು ಸಾರ್ಥಕ ಭವಿಷ್ಯ ರೂಪಿಸಿಕೊಳ್ಳುವಂತೆ ತಿಳಿ ಹೇಳಿದರು.ಪ್ರಾಂಶುಪಾಲ ಡಾ.ರಮೇಶ್.ಎಂ.ಎನ್ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ೨೦೨೩-೨೪ ನೇ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬಿ.ಎ ವಿದ್ಯಾರ್ಥಿನಿ ಸಿಂಧು ಬಣಗಾರ್, ಬಿ.ಎಸ್ಸಿಯ ಲಕ್ಷ್ಮಿ .ಎಂ.ಪಿ, ಬಿ.ಕಾಂನ ಸಹನಾ.ಜೆ.ಪಿ, ಬಿಬಿಎ ಪ್ರಿಯಾಂಕ.ಪಿ.ಡಿ ಅವರಿಗೆ ಸುನಂದಮ್ಮ ಮುನಿಯಪ್ಪ ಅವರು ಕೊಡ ಮಾಡುವ ತಲಾ ಹತ್ತು ಸಾವಿರ ನಗದು ಬಹುಮಾನ ವಿತರಿಸಿ, ಸತ್ಕರಿಸಲಾಯಿತು. ಪಿಎಚ್.ಡಿ ಪದವಿ ಪಡೆದ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಮಾಲತೇಶ.ಎಂ.ಎನ್ ಅವರನ್ನು ಗೌರವಿಸಲಾಯಿತು.ಕಾಲೇಜಿನ ಐಕ್ಯೂಎಸ್‌ಸಿ ಸಂಯೋಜಕ ಡಾ.ಎಚ್.ಪಿ.ಅನಂತನಾಗ್, ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ.ಕುಮಾರ್.ಎಂ, ದೈಹಿಕಶಿಕ್ಷಣ ನಿರ್ದೇಶಕ ಡಾ.ಚಂದ್ರಶೇಖರ್.ಸಿ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ.ಗಂಗರಾಜು.ಎಸ್, ಯುವ ರೆಡ್ ಕ್ರಾಸ್‌ನ ಸಂಚಾಲಕ ಡಾ.ಮಂಜುನಾಥ್, ಬಿ.ಕೆ, ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗದ ಸಂಚಾಲಕಿ ಡಾ.ಜಿ.ಎನ್.ದ್ರಾಕ್ಷಾಯಿಣಿ, ಐ.ಕ್ಯೂ.ಎಸ್.ಸಿ ಸಹಸಂಯೋಜಕ ಅಬ್ದುಲ್ ಬಷೀರ್, ಪುರಸ್ಕಾರದ ದಾನಿಗಳಾದ ಸುನಂದಮ್ಮ ಮುನಿಯಪ್ಪ ಮತ್ತಿತರರಿದ್ದರು.