ಸಾರಾಂಶ
ಧಾರವಾಡ:
ರಾಜಕೀಯದಲ್ಲಿ ಕಲಾವಿದರಿಗಿಂತ ಸಾಹಿತಿಗಳ ಮಾತಿಗೆ ಬೆಲೆ ಜಾಸ್ತಿ ಇದ್ದು, ರಾಜ್ಯದಲ್ಲಿ ಕಲಾ ಬಳಗವೊಂದು ಹುಟ್ಟಿಕೊಳ್ಳಬೇಕು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ ಹೇಳಿದರು.ಇಲ್ಲಿಯ ಸರ್ಕಾರಿ ಕಲಾ ಶಾಲೆಯಲ್ಲಿ ಲಲಿತಕಲಾ ಅಕಾಡೆಮಿಯು ಹಿರಿಯ ಕಲಾವಿದರಾದ ಪಿ.ಆರ್. ತಿಪ್ಪೇಸ್ವಾಮಿ, ಸೋಮಶೇಖರ ಸಾಲಿ ಹಾಗೂ ಬಿ.ಕೆ. ಹುಬಳಿ ಅವರ ಜನ್ಮಶತಮಾನೋತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಅಧ್ಯಕ್ಷತೆ ವಹಿಸಿದ ಅವರು, ರಾಜಕೀಯದಲ್ಲಿ ಕಲಾವಿದರ ಮಾತಿಗಿಂತ ಸಾಹಿತಿಗಳ ಮಾತು ನಡೆಯುತ್ತದೆ. ಕಾರಣ ಸಾಹಿತ್ಯ ಕ್ಷೇತ್ರ ಅಷ್ಟೊಂದು ಗಟ್ಟಿಯಾಗಿದೆ. ಆದ್ದರಿಂದ ರಾಜಕೀಯ ವಲಯದಲ್ಲಿ ಕಲಾ ಬಳಗವು ಗಟ್ಟಿಯಾಗಲು ಒಗ್ಗಟ್ಟಾಗಿ ಕಾರ್ಯ ಮಾಡಬೇಕಿದೆ. ನಮ್ಮಲ್ಲೊಬ್ಬ ಅಂತಹ ನಾಯಕನನ್ನು ಬೆಳೆಸಬೇಕಿದೆ ಎಂದರು.
ಈ ಹಿಂದೆ ಅಕಾಡೆಮಿಗೆ ₹ 2 ಕೋಟಿ ಅನುದಾನ ಬರುತ್ತಿತ್ತು. ಆದರೆ, ಈಗ ₹ 80 ಲಕ್ಷ ಬರುತ್ತಿದ್ದು ಸಂಕಷ್ಟದ ಕಾಲದಲ್ಲಿದ್ದು ಸಾಧ್ಯವಾದಷ್ಟು ಈ ಕ್ಷೇತ್ರಕ್ಕೆ ಉತ್ತಮ ಕಾರ್ಯ ಮಾಡಲು ಬದ್ಧನಾಗಿದ್ದೇನೆ ಎಂದ ಅವರು, ಸಾಹಿತ್ಯ, ಸಂಗೀತ ಸೇರಿದಂತೆ ಇತರೆ ಕ್ಷೇತ್ರಗಳಂತೆ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಲಾ ಕ್ಷೇತ್ರ ಬೆಳೆಯುತ್ತಿಲ್ಲ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಇಲ್ಲಿದ್ದರೂ ಕಲಾ ಬಳಗವಿಲ್ಲ. ಲಲಿತಾ ಕಲಾವಿದರು ತಮ್ಮ ಸ್ವಾಭಿಮಾನ ಬದಿಗಿಟ್ಟು ಹಂಚಿ ಹೋಗಿರುವ ಕಲಾವಿದರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಚಿತ್ರಕಲೆಗೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ಹೇಳಿದರು.ಜನ್ಮಶತಮಾನೋತ್ಸವ ಆಚರಿಸುತ್ತಿರುವ ಈ ಮೂವರು ನನ್ನ ಗುರುಗಳು. ಕಲಾವಿದೆ ಗಾಯತ್ರಿ ಗೌಡರ ಅವರ ಸಲಹೆಯಂತೆ ಅವರ ಜೀವನ, ಚರಿತ್ರೆ, ಸಾಧನೆ ಕುರಿತು ಕೃತಿಗಳನ್ನು ಹೊರ ತರುವ ಕಾರ್ಯ ಮಾಡುತ್ತೇನೆ. ಜತೆಗೆ ಕಲೆ ಕುರಿತ ಸಂಶೋಧನೆ ಮಾಡಲು ಅಕಾಡೆಮಿ ಬದ್ಧವಾಗಿದೆ. ಕಲೆ, ಕಲಾವಿದರ ಇತಿಹಾಸ ಮತ್ತು ದಾಖಲೀಕರಣ ಮುಂದಿನ ಯೋಜನೆಯಾಗಿದೆ. ಅದಕ್ಕೂ ಮುಂಚೆ ಕಲಾವಿದರ ಕುರಿತಾಗಿ ವಿಶ್ಲೇಷಣಾತ್ಮಕ ಸಮೀಕ್ಷೆ ಮಾಡಬೇಕಿದೆ. ಆಯಾ ಪ್ರದೇಶದಲ್ಲಿರುವ ವಿವಿಧ ಪ್ರಾಯದ ಕಲಾವಿದರನ್ನು ಒಗ್ಗೂಡಿಸಿ ಕಮ್ಮಟ ಮಾಡುವ ಯೋಜನೆಯೂ ಇದೆ. ಒಟ್ಟಾರೆ ಸಮಾಜದ ಸಹಕಾರದೊಂದಿಗೆ ಅಕಾಡೆಮಿಗೆ ಬೆಳೆಯಬೇಕಿದೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಚಿತ್ರಕಲಾವಿದರಿಗೆ ಅನುಕೂಲಕ್ಕಾಗಿ ಸಂಘದಲ್ಲಿ ಆರ್ಟ ಗ್ಯಾಲರಿ ಮಾಡಿದ್ದು ಅದರ ಸದ್ಬಳಿಕೆಯಾಗಲಿ. ಜತೆಗೆ ಕಲಾಕೃತಿಗಳ ಬಗ್ಗೆ ಹೆಚ್ಚು ಸಾಹಿತ್ಯ, ವಿಮರ್ಶೆ ಬರಬೇಕಿದೆ ಎಂದು ಅಭಿಪ್ರಾಯಪಟ್ಟರು.ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ವೆಂಕಟ್ಟಪ್ಪ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಗಾಯತ್ರಿ ಗೌಡರ, ಸುರೇಶ ಹಾಲಭಾವಿ, ವಿದ್ಯಾಧರ ಸಾಲಿ, ರುದ್ರಣ್ಣ ಹರ್ತಿಕೋಟಿ, ಜಯಂತ ಹುಬಳಿ, ಈಶ್ವರ ಜೋಶಿ ಮಾತನಾಡಿದರು. ಬಿ. ಮಾರುತಿ ನಿರೂಪಿಸಿದರು. ಸರ್ಕಾರಿ ಚಿತ್ರಕಲಾ ಕಾಲೇಜು ಮುಖ್ಯಸ್ಥ ಡಾ. ಕುರಿಯವರ ಇದ್ದರು.ಕಲಾ ಗ್ಯಾಲರಿಗಳಾಗಲಿ..ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಹಿರಿಯ ಕಲಾವಿದ ಎಂ.ಆರ್. ಬಾಳಿಕಾಯಿ, ಕಲೆಗೆ ವ್ಯಾಪ್ತಿ ಇಲ್ಲ. ವಿಶ್ವವ್ಯಾಪ್ತಿ ಹರಡಿದ್ದು ಈ ವಿಷಯದಲ್ಲಿ ಕಲಾವಿದರು ಸಾಕಷ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆರ್ಟ್ ಗ್ಯಾಲರಿ ಆಗಬೇಕು. ಈ ಮೂಲಕ ಮಕ್ಕಳನ್ನು ಆಕರ್ಷಿಸಿ ಕಲಾ ಜಗತ್ತನ್ನು ಸೃಷ್ಟಿಸಬೇಕಿದೆ ಎಂದರು.