ಸಾರಾಂಶ
ಲಕ್ಷ್ಮೇಶ್ವರ: ವಿಕಲಚೇತನತೆ ಶಾಪವಲ್ಲ, ನಮ್ಮ ಪೂರ್ವಜನ್ಮದ ತಪ್ಪಿನಿಂದ ಎನ್ನುವ ತಿಳಿವಳಿಕೆ ಕೂಡಾ ಸುಳ್ಳು, ದೈಹಿಕ ನ್ಯೂನ್ಯತೆ ಮೆಟ್ಟಿ ನಿಲ್ಲುವ ಸಾಮರ್ಥ್ಯ ವಿಕಲಚೇತನದಲ್ಲಿ ಇರುತ್ತದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ವೀರಗಂಗಾಧರ ಸಮುದಾಯ ಭವನದಲ್ಲಿ ಗುರುವಾರ ಶಿರಹಟ್ಟಿ ವಿಧಾನಸಭೆ ಮತಕ್ಷೇತ್ರದ ವಿಕಲಚೇತನರಿಗೆ ಟ್ರೈಸಿಕಲ್ ಹಾಗೂ ವಿದ್ಯುತ್ ಚಾಲಿತ ವ್ಹೀಲ್ ಚೇರ್ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ನೀಡುವ ಮೂಲಕ ಅವರ ಬಾಳಿಗೆ ಬೆಳಕು ನೀಡುವ ಕಾರ್ಯ ಮಾಡುವುದು ಅಗತ್ಯವಾಗಿದೆ. ವಿಕಲಚೇತನರಲ್ಲಿ ದೇವರು ಅದಮ್ಯ ಆತ್ಮವಿಶ್ವಾಸ ತುಂಬಿ ಕಳಿಸುರುತ್ತಾನೆ. ಆದರೆ ನಾವು ಅವರ ಆತ್ಮವಿಶ್ವಾಸಕ್ಕೆ ಅಡ್ಡಗೋಡೆಯಾಗಿ ನಿಲ್ಲುವ ಬದಲು ಅವರ ದಾರಿಗೆ ಹೂವು ತರುವ ಕಾರ್ಯ ಮಾಡಬೇಕು. ವಿಕಲಚೇತನರು ಸರ್ಕಾರದ ಸೌಲಭ್ಯ ಪಡೆದುಕೊಂಡು ನಮ್ಮ ನಿಮ್ಮಂತೆ ಸಾಮಾನ್ಯ ಬದುಕು ಸವಿಯುವಂತಾಗಬೇಕು, ಬೇರೊಬ್ಬರಿಗೆ ವಿಕಲಚೇತನರು ಭಾರ ಎನ್ನುವ ಭಾವನೆ ನಮ್ಮಿಂದ ದೂರಾಗ ಬೇಕಿದೆ ಎಂದು ಹೇಳಿದರು.
ಈ ವೇಳೆ 17 ಟ್ರೈಸಿಕಲ್ ಹಾಗೂ 3 ಬ್ಯಾಟರಿ ಚಾಲಿತ ಸೈಕಲ್‌ನ್ನು ವಿಕಲಚೇತನರಿಗೆ ವಿತರಣೆ ಮಾಡಲಾಯಿತು.ಈ ವೇಳೆ ಲಕ್ಷ್ಮೇಶ್ವರದ ತಹಸೀಲ್ದಾರ್ ವಾಸುದೇವ ಸ್ವಾಮಿ, ಶಿರಹಟ್ಟಿ ತಹಸೀಲ್ದಾರ್ ಅನಿಲ ಬಡಿಗೇರ, ಇಓ ಕೃಷ್ಣಪ್ಪ ಧರ್ಮರ, ಪ್ರವೀಣ ಬಾಳಿಕಾಯಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಹಾಂತೇಶ ಕುರಿ, ತಾಲೂಕು ಮಟ್ಟದ ಭಾರತಿ ಮೂರುಶಿಳ್ಳಿನ, ಮಂಜುನಾಥ ರಾಮಗೇರಿ ಇದ್ದರು.