ಇಡೀ ಧಾರವಾಡ ಜಿಲ್ಲೆ ಕ್ಷಯ ರೋಗ ಮುಕ್ತವಾಗಲಿ: ಜಿಲ್ಲಾಧಿಕಾರಿ ದಿವ್ಯಪ್ರಭು

| Published : Mar 25 2025, 12:49 AM IST

ಇಡೀ ಧಾರವಾಡ ಜಿಲ್ಲೆ ಕ್ಷಯ ರೋಗ ಮುಕ್ತವಾಗಲಿ: ಜಿಲ್ಲಾಧಿಕಾರಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ಧಾರವಾಡ ಜಿಲ್ಲೆಯನ್ನು ಕ್ಷಯ ಮುಕ್ತ ಮಾಡಲು ಆರೋಗ್ಯ ಇಲಾಖೆ ಹಾಗೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಿ ತೊಡಗಿಸಿಕೊಳ್ಳಲು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಧಾರವಾಡ: ಇಡೀ ಧಾರವಾಡ ಜಿಲ್ಲೆಯನ್ನು ಕ್ಷಯ ಮುಕ್ತ ಮಾಡಲು ಆರೋಗ್ಯ ಇಲಾಖೆ ಹಾಗೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಿ ತೊಡಗಿಸಿಕೊಳ್ಳಲು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳ ಸತ್ಕಾರದಲ್ಲಿ ಮಾತನಾಡಿದರು.ವಿಶ್ವ ಆರೋಗ್ಯ ಸಂಸ್ಥೆಯು 2030ರ ವೇಳೆಗೆ ಇಡೀ ವಿಶ್ವವನ್ನು ಕ್ಷಯರೋಗದಿಂದ ಮುಕ್ತಗೊಳಿಸುವ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 35 ಗ್ರಾಪಂಗಳನ್ನು ಕ್ಷಯರೋಗ ಮುಕ್ತಗೊಳಿಸಿದ್ದು, ಸಂತಸ ತಂದಿದೆ. ಜಿಲ್ಲೆಯಲ್ಲಿ ಈಗ 3,323 ಕ್ಷಯ ರೋಗದ ಪಾಸಿಟಿವ್ ಪ್ರಕರಣಗಳಿವೆ. ಇದರಲ್ಲಿ ಅತೀ ಹೆಚ್ಚು ಪ್ರಕರಣಗಳು ಹುಬ್ಬಳ್ಳಿ ಶಹರದಲ್ಲಿ ಕಂಡು ಬಂದಿವೆ. ಇದಕ್ಕೆ ಹೆಚ್ಚು ಜನಸಾಂದ್ರತೆ ಕಾರಣವಿರಬಹುದು ಎಂದರು.

2023ರ ಜನವರಿಯಿಂದ ಡಿಸೆಂಬರ್‌ ವರೆಗೆ 2,292 ಜನ ಕ್ಷಯರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1,966 ಜನ ಗುಣಮುಖರಾಗಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಗುಣಮುಖವಾದವರ ದರ ಜಿಲ್ಲೆಯಲ್ಲಿ ಶೇ. 85.7ರಷ್ಟಿದೆ. ಆರೋಗ್ಯ ಇಲಾಖೆಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಪೂರ್ಣ ಗುರಿ ಸಾಧಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದಕ್ಕೆ ಮುಂಜಾಗ್ರತೆ ಅಗತ್ಯವಿದೆ. ಜಿಲ್ಲೆಯ ಎಲ್ಲ 146 ಗ್ರಾಮ ಪಂಚಾಯಿತಿಗಳನ್ನು ಕ್ಷಯ ಮುಕ್ತ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಕ್ಷಯರೋಗದ ತಿಳಿವಳಿಕೆ ನೀಡಲಿದ್ದಾರೆ. ಸಂಶಯಾಸ್ಪದ ಪ್ರಕರಣ ಕಂಡು ಬಂದಲ್ಲಿ ಕಫ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತಾರೆ. ಕ್ಷಯರೋಗ ಖಚಿತಪಟ್ಟಲ್ಲಿ ಅವರ ಕುಟುಂಬ ಸದಸ್ಯರಿಗೆ ಜಾಗೃತಿ ಮೂಡಿಸಿ, ಮುಂಜಾಗ್ರತಾ ಕ್ರಮ ತಿಳಿಸುತ್ತಾರೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಆರೋಗ್ಯಾಧಿಕಾರಿ ಡಾ. ಸುಜಾತಾ ಹಸವೀಮಠ, ಡಾ. ಶಶಿ ಪಾಟೀಲ, ಡಾ. ರವೀಂದ್ರ ಬೋವೆರ, ಬಿ.ಆರ್. ಪಾತ್ರೋಟ, ಡಾ. ಕೆ.ಎನ್. ತನುಜಾ ಇದ್ದರು. ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೋಮವಾರ ಬೆಳಗ್ಗೆ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಅವರು ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು.