ಹೋಳಿ ಹುಣ್ಣಿಮೆಯಲ್ಲಿ ಖುಷಿಯ ರಂಗವಲ್ಲಿ ಮೂಡಲಿ-ಶಾಸಕ ಮಾನೆ

| Published : Apr 01 2024, 12:46 AM IST

ಸಾರಾಂಶ

ಪ್ರತಿಯೊಂದು ಹಬ್ಬ, ಆಚರಣೆಗಳಿಗೂ ಸಹ ತನ್ನದೇ ಆದ ಇತಿಹಾಸ, ಪಾವಿತ್ರ್ಯತೆ ಇದೆ. ಈ ಹೋಳಿ ಹುಣ್ಣಿಮೆಯಲ್ಲಿ ಕಷ್ಟಗಳೆಲ್ಲವೂ ಕರಗಲಿ, ಖುಷಿಯ ರಂಗವಲ್ಲಿ ಮೂಡಲಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಪ್ರತಿಯೊಂದು ಹಬ್ಬ, ಆಚರಣೆಗಳಿಗೂ ಸಹ ತನ್ನದೇ ಆದ ಇತಿಹಾಸ, ಪಾವಿತ್ರ್ಯತೆ ಇದೆ. ಈ ಹೋಳಿ ಹುಣ್ಣಿಮೆಯಲ್ಲಿ ಕಷ್ಟಗಳೆಲ್ಲವೂ ಕರಗಲಿ, ಖುಷಿಯ ರಂಗವಲ್ಲಿ ಮೂಡಲಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಶನಿವಾರ ರಾತ್ರಿ ಇಲ್ಲಿನ ತಾರಕೇಶ್ವರ ದೇವಸ್ಥಾನದ ಎದುರು ಕದಂಬ ಯುವಶಕ್ತಿ ಆಯೋಜಿಸಿದ್ದ ರಂಗಿನ ರಾತ್ರಿ ಕಾರ್ಯಕ್ರಮದ ಸಮಾರೋಪ ಹಾಗೂ ಯುವಶಕ್ತಿಯ ಬೆಳ್ಳಿ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ ವರ್ಷ ವರುಣ ನಮ್ಮೊಂದಿಗೆ ಮುನಿಸಿಕೊಂಡಿದ್ದಾನೆ. ಈ ವರ್ಷ ವರುಣನ ಮುನಿಸು ತಣಿಯಲಿ. ಸಮೃದ್ಧ ಮಳೆ ಸುರಿದು ಕಷ್ಟಗಳೆಲ್ಲವೂ ದೂರ ಸರಿಯಲಿ ಎಂದು ಹೇಳಿದ ಅವರು ಕದಂಬ ಯುವಶಕ್ತಿ ವರ್ಷದುದ್ದಕ್ಕೂ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಮನೆ ಮಾತಾಗಿದೆ. ಹಾನಗಲ್‌ಗೆ ಸಾಂಸ್ಕೃತಿಕ ಮುಕುಟ ತೊಡಿಸಿದೆ. ಇಂಥ ಸಂಘಟನೆಗೆ ೨೫ ವರ್ಷ ತುಂಬುತ್ತಿರುವುದು ಸಂತಸದ ಸಂಗತಿಯಾಗಿದ್ದು, ಸಂಘಟನೆಯೊಂದಿಗೆ ಸದಾ ಜೊತೆಗಿದ್ದು ಸಂಸ್ಕೃತಿಯ ಉಳಿವಿಗೆ ಸಾಥ್ ನೀಡುವುದಾಗಿ ಹೇಳಿದರು. ಯುವಶಕ್ತಿಯ ಅಧ್ಯಕ್ಷ ಗುರುರಾಜ್ ನಿಂಗೋಜಿ ಮಾತನಾಡಿ, ಸಂಘಟನೆಗೆ ೨೫ ವರ್ಷ ತುಂಬಿದೆ ಎನ್ನುವುದು ಖುಷಿ ತಂದಿದೆ. ಹಾನಗಲ್ ನಗರದ ನಾಗರಿಕೆ ಸಹಕಾರ ಇದಕ್ಕೆ ಕಾರಣ. ಆಧುನಿಕ ದಿನಗಳಲ್ಲಿ ಸಂಸ್ಕೃತಿ, ಸಂಪ್ರದಾಯಗಳು ನಶಿಸುತ್ತಿದ್ದು, ಇವುಗಳನ್ನು ಉಳಿಸುವುದೇ ಯುವಶಕ್ತಿಯ ಉದ್ದೇಶ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ, ಯಾಸೀರಖಾನ ಪಠಾಣ, ಮಂಜು ನೀಲಗುಂದ, ಆದರ್ಶ ಶೆಟ್ಟಿ, ಸಂತೋಷ ಸುಣಗಾರ, ರವಿ ಪುರೋಹಿತ್, ಇಷ್ಟಲಿಂಗ ಸಾಲವಟಗಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಇಡೀ ರಾತ್ರಿ ನಡೆದ ರಂಗಿನ ಕಾರ್ಯಕ್ರಮಗಳು ಹೋಳಿ ಹುಣ್ಣಿಮೆ ರಂಗು ತುಂಬಿದವು.