ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಸರ್ಕಾರವು ರೈತರ ಕೃಷಿ ಚಟುವಟಿಕೆಗಳಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ರೈತರಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವುದನ್ನು ರೈತರು ಸದ್ಬಳಕೆ ಮಾಡಿಕೊಂಡು ಕೃಷಿಯಲ್ಲಿ ಹೆಚ್ಚಿನ ಲಾಭಾಂಶ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.ಜಿಲ್ಲಾ ಪಂಚಾಯತ್ ವಿಜಯಪುರ, ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಮುದ್ದೇಬಿಹಾಳ, ರೈತ ಸಂಪರ್ಕ ಕೇಂದ್ರ ತಾಳಿಕೋಟೆ ಸಹಯೋಗದಲ್ಲಿ ೨೦೨೩-೨೪ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ತಾಳಿಕೋಟೆ ತಾಲೂಕಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕಾಗಿ ಬಂದ ಅರ್ಜಿಗಳನ್ನು ಮಂಗಳವಾರ ಲಾಟರಿ ಮೂಲಕ ಫಲಾನುಭಗಳನ್ನು ಆಯ್ಕೆಗೊಳಿಸುವ ಪ್ರಕ್ರಿಯೆ ನಂತರ ಮಾತನಾಡಿದ ಅವರು, ಎಲ್ಲ ರೈತರಿಗೆ ಒಮ್ಮಿಗೆ ಯೋಜನೆಗಳನ್ನು ಮುಟ್ಟಿಸಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ. ದೇವರಿಂದಲೂ ಕೂಡಾ ಸಾಧ್ಯವಿಲ್ಲ. ಪ್ರತಿ ವರ್ಷ ಈ ಯೋಜನೆಗಳ ಲಾಭವನ್ನು ಪಡೆದುಕೊಂಡಂತಹ ರೈತರು ಮುಂದಿನ ವರ್ಷ ಅರ್ಜಿಗಳನ್ನು ಸಲ್ಲಿಸುವುದನ್ನು ನಿಲ್ಲಿಸಬೇಕು. ಇದರಿಂದ ಮತ್ತೊಬ್ಬ ರೈತರಿಗೆ ಈ ಯೋಜನೆಯ ಲಾಭ ಸಿಗಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರವು ರೈತರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿ ಮಾಡಲು ಯೋಜನೆಯನ್ನು ರೂಪಿಸಿರುತ್ತದೆ. ಕೆಲವು ಯೋಜನೆಗಳ ಮೂಲಕ ಸಬ್‌ಸಿಡಿ ಸಲಕರಣೆಗಳು, ಬೀಜ ಗೊಬ್ಬರಗಳು ಹಾಗೂ ನೈಸರ್ಗಿಕವಾಗಿ ತೊಂದರೆಯಾದಂತಹ ಸಂದರ್ಭದಲ್ಲಿ ಭೀಮಾಯೋಜನೆಯ ಮೂಲಕ ಸಹಾಯ ದನವನ್ನು ನೀಡುತ್ತದೆ. ಬೆಳೆದಂತಹ ಬೆಳೆಗೆ ಬೆಂಬಲ ಬೆಲೆಯನ್ನು ಕೊಡುವುದರ ಮೂಲಕ ದರ ನಿಗದಿ ಪಡಿಸಿ ಯೋಗ್ಯವಾದ ಬೆಲೆ ಸಿಗಲಿ ರೈತನ ಮೊಗದಲ್ಲಿ ಮಂದಹಾಸ ಮೂಡಲಿ ಎಂಬ ಯೋಚನೆಯೊಂದಿಗೆ ನೇರವಾಗಿ ರೈತರಿಂದ ಮಾಲುಗಳನ್ನು ಖರೀದಿಸುವಂತಹ ಕಾರ್ಯಕ್ಕೂ ಸಹ ಸರ್ಕಾರವು ಮುಂದಾಗುತ್ತ ಬಂದಿದೆ ಎಂದು ತಿಳಿಸಿದರು.ಕಾರ್ಯಕ್ರಮಕ್ಕೂ ಮುಂಚೆ ಎಲ್ಲ ಫಲಾನುಭವಿಗಳ ಹೆಸರು ಬರೆದಿರುವ ಚೀಟಿಯನ್ನು ಬಾಕ್ಸ್‌ನಲ್ಲಿ ಹಾಕಿ ಕ್ರಮಬದ್ದವಾಗಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಇದೇ ಸಮಯದಲ್ಲಿ ತಾಳಿಕೋಟೆ ರೈತ ಸಂಪರ್ಕ ಕೇಂದ್ರದ ವತಿಯಿಂದ ಶಾಸಕ ಸಿ.ಎಸ್.ನಾಡಗೌಡ ಹಾಗೂ ಅತಿಥಿ ಮಹೋದಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಮಯದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮಾಡಗಿ, ಪ್ರಭುಗೌಡ ಮದರಕಲ್ಲ, ನೀಲಮ್ಮ ಪಾಟೀಲ, ಎಂ.ಕೆ.ಚೋರಗಸ್ತಿ, ನಿಂಗನಗೌಡ ಬಿರಾದಾರ, ವಿಜಯಸಿಂಗ್ ಹಜೇರಿ, ಎಸ್.ಎನ್.ಪಾಟೀಲ, ಸಂಗನಗೌಡ ಅಸ್ಕಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಸುರೇಶ ಭಾವಿಕಟ್ಟಿ, ಕೃಷಿ ಅಧಿಕಾರಿ ಮಹೇಶ ಜೋಶಿ, ಎಂ.ಎಚ್.ಬಿಳಗಿ, ಸಂಗಮೇಶ ಪಾಟೀಲ, ವಿನೋದ ನಾಯಕ, ಅಮರೇಶ ಅಂಗಡಿ, ವಿರುಪಾಕ್ಷ ನಂದಿಕೋಲ, ಇರಗಪ್ಪ ಅರಳಿಕಟ್ಟಿ, ರಾಮಪ್ಪ ಹರಿಜನ, ರವಿ ಹೊಸಮನಿ, ಕಿರಣ ಬೊಮ್ಮನಹಳ್ಳಿ, ಹಣಮಂತ್ರಾಯ ಕುಂಟರಡ್ಡಿ ಹಾಗೂ ತಾಳಿಕೋಟೆ ತಾಲೂಕಿನ ರೈತಾಪಿ ಜನತೆ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಮಹೇಶ ಜೋಶಿ ನಿರೂಪಿಸಿ, ವಂದಿಸಿದರು.ಇಂದು ಕೃಷಿ ಭಾಗ್ಯ ಯೋಜನೆಯಡಿ ಕೃಷಿಹೊಂಡಗಳಿಗಾಗಿ ೩೦೦ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ತಾಳಿಕೋಟೆ ತಾಲೂಕಿಗೆ ಸರ್ಕಾರದಿಂದ ಒದಗಿ ಬಂದಿರುವುದು. ಕೇವಲ ೧೮ ಹೀಗಾಗಿ ಲಾಟರಿಯ ಮೂಲಕ ಆಯ್ಕೆ ಮಾಡುವಂತಹ ಸಂದರ್ಭ ಒದಗಿ ಬಂದಿದೆ. ಮುಂದಿನ ದಿನಗಳಲ್ಲಿ ಈ ಕೃಷಿ ಹೊಂಡಗಳ ಸಂಖ್ಯೆಯನ್ನು ಸರ್ಕಾರದಿಂದ ಹೆಚ್ಚಿಸಲು ಕ್ರಮ ವಹಿಸಲಾಗುವುದು.-ಸಿ.ಎಸ್.ನಾಡಗೌಡ (ಅಪ್ಪಾಜಿ), ಶಾಸಕರು.