ಪ್ರತಿ ಹಿಂದೂ ಮನೆ ಮೇಲೆ ಹನುಮಧ್ವಜ ಹಾರಲಿ: ಯಶ್ಪಾಲ್ ಸುವರ್ಣ

| Published : Jan 30 2024, 02:00 AM IST

ಸಾರಾಂಶ

ಭಜರಂಗದಳ ನಿಷೇಧದ ಪೂರ್ವಭಾವಿಯಾಗಿ ಸರ್ಕಾರ ಹನುಮ ಧ್ವಜ ತೆರವುಗೊಳಿಸಿದೆ. ತಮ್ಮದು ಮುಸ್ಲಿಂ ಪರ ಸರ್ಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಹನುಮ ಧ್ವಜ ತೆರವುಗೊಳಿಸಿ ಅವರ ಓಲೈಕೆ ಮಾಡುತ್ತಿದೆ ಎಂದು ಯಶ್ಪಾಲ್‌ ಆರೋಪಿಸಿರು.

ಕನ್ನಡಪ್ರಭ ವಾರ್ತೆ ಉಡುಪಿ

ಸಿದ್ದರಾಮಯ್ಯ ನೇತೃತ್ವದ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ಮೂಲಕ ಮಂಡ್ಯದಲ್ಲಿ ಹನುಮ ಧ್ವಜವನ್ನು ತೆರವುಗೊಳಿಸುವ ಮೂಲಕ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿರುವಂತೆ ಭಜರಂಗದಳ ನಿಷೇಧದ ಪೂರ್ವಭಾವಿಯಾಗಿ ಸರ್ಕಾರ ಹನುಮ ಧ್ವಜ ತೆರವುಗೊಳಿಸಿದೆ. ತಮ್ಮದು ಮುಸ್ಲಿಂ ಪರ ಸರ್ಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಹನುಮ ಧ್ವಜ ತೆರವುಗೊಳಿಸಿ ಅವರ ಓಲೈಕೆ ಮಾಡುತ್ತಿದೆ ಎಂದವರು ಆರೋಪಿಸಿದ್ದಾರೆ

ಮಂಡ್ಯದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಘಟನೆ ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಸರ್ಕಾರ ಹನುಮ ದ್ವಜವನ್ನ ಹಾರಿಸಲು ಅನುಮತಿ ನೀಡದಿದ್ದಲ್ಲಿ ‘ಮಂಡ್ಯ ಚಲೋ’ ಕರೆ ನೀಡಿ, ರಾಜ್ಯದ ಮೂಲೆ ಮೂಲೆಗಳಿಂದ ಹಿಂದೂಗಳು ಹನುಮ ದ್ವಜ ಹಿಡಿದು ಮಂಡ್ಯ ಜಿಲ್ಲೆಗೆ ಕಾಲಿಡಲಿದ್ದಾರೆ ಎಂದವರು ಎಚ್ಚರಿಕೆ ನೀಡಿದ್ದಾರೆ.

ಹಾಗೆಯೇ ರಾಜ್ಯದ ಪ್ರತಿಯೊಬ್ಬ ಹಿಂದುವೂ ತಮ್ಮ ತಮ್ಮ ಮನೆಗಳ ಮೇಲೆ ಹನುಮ ದ್ವಜ ಹಾರಿಸಿ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಬೇಕು ಎಂದವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.