ಜೆಜೆಎಂ ಯೋಜನೆ ಪ್ರತಿ ಹಳ್ಳಿಗಳಲ್ಲಿ ಸದ್ಬಳಕೆಯಾಗಲಿ

| Published : Jul 20 2025, 01:15 AM IST

ಸಾರಾಂಶ

ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆ ಪ್ರತಿ ಹಳ್ಳಿಯಲ್ಲಿ ಸದ್ಬಳಕೆಯಾಗಬೇಕು. ದಿನದ 24 ಗಂಟೆ ನೀರು ಬರುವಂತೆ ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಅಥಣಿ

ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆ ಪ್ರತಿ ಹಳ್ಳಿಯಲ್ಲಿ ಸದ್ಬಳಕೆಯಾಗಬೇಕು. ದಿನದ 24 ಗಂಟೆ ನೀರು ಬರುವಂತೆ ಕ್ರಮ ಕೈಗೊಳ್ಳಬೇಕು. ಈ ಯೋಜನೆಯ ನಿರ್ವಹಣೆಗೆ ಗ್ರಾಪಂ ಮಟ್ಟದಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಮಿತಿ ರಚನೆ ಮಾಡಿ, ಕರ ವಸೂಲಿ ದರ ಘೋಷಣೆ ಮಾಡುವುದಲ್ಲದೆ ಬಿಲ್ ಪಾವತಿ ಕಡ್ಡಾಯಗೊಳಿಸಬೇಕು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹೇಳಿದರು.

ತಾಲೂಕಿನ ಕನ್ನಾಳ, ಪಡತರವಾಡಿ, ಐಗಳಿ, ದಬದಬಹಟ್ಟಿ ಹಾಗೂ ರಡ್ಡೇರಹಟ್ಟಿ ಗ್ರಾಮಗಳಿಗೆ ಭೇಟಿ ನೀಡಿ, ಜೆಜೆಎಂ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಜೆಜೆಎಂ ಯೋಜನೆಯನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ಪೈಪ್‌ಲೈನ್‌ಗಳಿಗೆ ಮೀಟರ್‌ಗಳನ್ನು ಅಳವಡಿಸುವುದರಿಂದ ಜನರಿಗೆ ನೀರಿನ ಮೌಲ್ಯ ತಿಳಿಯುತ್ತದೆ ಮತ್ತು ನೀರಿನ ಸಮರ್ಪಕ ಬಳಕೆಗೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.

ಕನ್ನಾಳ ಸರ್ಕಾರಿ ಶಾಲೆ ಮತ್ತು ಗ್ರಾಪಂಗೆ ಭೇಟಿ:

ತಾಲೂಕಿನ ಕನ್ನಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಎಲ್ಲದಕ್ಕೂ ಶಿಕ್ಷಣವೇ ಮೂಲ. ಉತ್ತಮ ಶಿಕ್ಷಣವು ಗ್ರಾಮದ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅತ್ಯಂತ ಮುಖ್ಯ. ಹೀಗಾಗಿ, ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಪೋಷಕರು ಮುಂದಾಗಬೇಕು. ಸರ್ಕಾರಿ ಶಾಲೆಗಳ ಕುರಿತು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಬಿಸಿಯೂಟದ ಗುಣಮಟ್ಟ ಮತ್ತು ಶಾಲೆಯ ಮೂಲ ಸೌಕರ್ಯಗಳ ಕುರಿತು ಮಾಹಿತಿ ಪಡೆದರು. ಗ್ರಾಮಸ್ಥರು ಈ ವಿಷಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಿದರು.

ಗ್ರಾಪಂಗಳಿಗೆ ಲಭ್ಯವಿರುವ ಅನುದಾನದ ಬಗ್ಗೆಯೂ ಗಮನಸೆಳೆದ ಸಿಇಒ ಶಿಂದೆ, ಗ್ರಾಪಂಗಳಿಗೆ ಸಾಕಷ್ಟು ಅನುದಾನ ಲಭ್ಯವಿದೆ. ಈ ಅನುದಾನ ಸಮರ್ಪಕ ಮತ್ತು ಪ್ರಾಮಾಣಿಕವಾಗಿ ಬಳಸಿಕೊಂಡು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಗ್ರಾಪಂ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರೆಡ್ಡಿರಹಟ್ಟಿ ಗ್ರಾಮದ ಸ್ವಸಹಾಯ ಸಂಘದ ಘಟಕಕ್ಕೆ ಭೇಟಿ:

ತಾಲೂಕಿನ ರಡ್ಡಿರಹಟ್ಟಿ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸರ್ಕಾರದ ಆರ್ಥಿಕ ನೆರವಿನಿಂದ ನಡೆಸಲಾಗುವ ಗೃಹಬಳಕೆ ವಸ್ತುಗಳ ಉತ್ಪಾದನಾ ಘಟಕಕ್ಕೆ ಸಿಇಒ ರಾಹುಲ್ ಶಿಂಧೆ ಭೇಟಿ ನೀಡಿದರು. ಗೃಹಬಳಕೆಗೆ ಉಪಯೋಗಿಸುವ ಆಹಾರ ಉತ್ಪನ್ನ, ಮಸಾಲೆ ಪದಾರ್ಥಗಳ ತಯಾರಿಕೆ ಜೊತೆಗೆ ಶುದ್ಧವಾದ ಗಾಣದ ಎಣ್ಣೆ ತೆಗೆಯುವ ಘಟಕ ಪ್ರಾರಂಭಿಸುವುದು ಮತ್ತು ಕೋಳಿ ಸಾಕಾಣಿಕೆ ಮೂಲಕ ಸಬಲೀಕರಣ ಹೊಂದಲು ಸಾಧ್ಯವಿದೆ. ಮುಂಬರುವ ದಿನಗಳಲ್ಲಿ ಮಹಿಳೆಯರು ವಿಶೇಷ ತರಬೇತಿ ಪಡೆದುಕೊಂಡು ಇಂತಹ ಗೃಹ ಉದ್ಯೋಗ ಆರಂಭಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದರು.

ಈ ವೇಳೆ ಚಿಕ್ಕೋಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಪಾಂಡುರಂಗ ಜೋಷಿ, ಯೋಜನಾ ವ್ಯವಸ್ಥಾಪಕ ದಿಲೀಪ್.ಕೆ, ತಾಪಂ ಇಒ ಶಿವಾನಂದ ಕಲ್ಲಾಪುರ, ನೀರು ಮತ್ತು ನೈರ್ಮಲ್ಯ ಇಲಾಖೆ ರವೀಂದ್ರ ಮುರುಗಾಲಿ, ಬಸವರಾಜ ಪಾಟೀಲ, ಕಿರಣ್ ಮಾಳಿ, ಅಥಣಿ ಜಿಪಂ ಕಾರ್ಯನಿರ್ವಾಹಕ ಅಭಿಯಂತರ ಈರಣ್ಣ ವಾಲಿ ಸೇರಿ ವಿವಿಧ ಗ್ರಾಮಗಳ ಮುಖಂಡರು, ಹಿರಿಯರು, ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆನ್‌ಲೈನ್ ಸೇವೆಗಳಿಗೆ ಅಡ್ಡಿ: ಸಿಇಒ ಶಿಂದೆಗೆ ಮನವಿ

ಅಥಣಿ ತಾಲೂಕಿನ ಕನ್ನಾಳ ಗ್ರಾಪಂ ಸೇರಿದಂತೆ ಅನೇಕ ಪಂಚಾಯಿತಿ ಕಚೇರಿಗಳಲ್ಲಿ ಇಂಟರ್‌ನೆಟ್ ಮತ್ತು ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳು ಸಕಾಲಕ್ಕೆ ದೊರಕುತ್ತಿಲ್ಲ. ಆನ್‌ಲೈನ್ ತರಗತಿಗಳನ್ನು ಕೇಳಲು ಮಕ್ಕಳು, ದೂರದವರೊಂದಿಗೆ ಮಾತನಾಡಲು ಗ್ರಾಮಸ್ಥರು ತಮ್ಮ ಮನೆಗಳ ಮೇಲೆ ಹತ್ತಿ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡು, ಜಿಪಂ ಸಿಇಒ ರಾಹುಲ್ ಶಿಂದೆಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರ ಅಹವಾಲು ಆಲಿಸಿದ ಸಿಇಒ, ಈ ಸಮಸ್ಯೆ ಕೇವಲ ಕನ್ನಾಳ ಗ್ರಾಮಕ್ಕೆ ಸೀಮಿತವಾಗಿಲ್ಲ. ತಾಲೂಕಿನ ಅನೇಕ ಗ್ರಾಪಂಗಳಿಗೆ ಇಂಟರ್‌ನೆಟ್ ಸಮಸ್ಯೆ ಇರುವ ದೂರುಗಳು ಬರುತ್ತವೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.