ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದೇಶ ಸೇವೆಗೆ ಯುದ್ಧ ಮಾಡಬೇಕಿಲ್ಲ. ನಾವು ಕಲಿತ ವಿದ್ಯೆಯ ಮೂಲಕ ಸಮಾಜದ ಸ್ವಾಸ್ಥ್ಯ ಹೆಚ್ಚು ಮಾಡುವ ಕೆಲಸ ಮಾಡಿದರೆ ಸಾಕು ಎಂದು ಅಂತಾರಾಷ್ಟ್ರೀಯ ವಯಲಿನ್ ವಾದಕ ಡಾ. ಮೈಸೂರು ಮಂಜುನಾಥ್ ಹೇಳಿದರು.ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಶನಿವಾರ ನಡೆದ ವಿಶೇಷ ಪರೀಕ್ಷೆಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪರೀಕ್ಷೆ ಮಾಡುವುದು ಓರೆಗಲ್ಲು ಇದ್ದಂತೆ. ಈ ಪರೀಕ್ಷೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ವಿದ್ವತ್ ಮಟ್ಟಕ್ಕೆ ಬರುವಷ್ಟರಲ್ಲಿ ಒಂದು ಉತ್ತಮ ಶಿಕ್ಷಣ ಕೊಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಕಲಿಯಬೇಕು ಎಂಬ ಮನೋಭಾವ ಇರುವುದು ಬಹಳ ಮುಖ್ಯ. ಟಿವಿ, ಮೊಬೈಲ್ ಮುಂತಾದವುಗಳ ನಡುವೆ ಸಂಗೀತ ಕಲಿತು, ಹೀಗೆ ರ್ಯಾಂಕ್‌ಪಡೆಯಬೇಕು ಎಂದರೆ ಇದು ಅತ್ಯಂತ ಶ್ಲಾಘನೀಯ ಕೆಲಸ ಎಂದರು.ಈ ಪ್ರಮಾಣ ಪತ್ರ ಮನೆಯಲ್ಲಿಟ್ಟು ಕೂರಬೇಡಿ, ಜೀವನ ಪರ್ಯಂತ ನೀವು ಕಲಿತ ವಿದ್ಯೆಯನ್ನು ಪೋಷಿಸಿಕೊಂಡು ಹೋಗಿ. ಮನೆಯಲ್ಲಿ ಕೂತು ಯಾರು ಬೇಕಾದರೂ ಓದಬಹದು. ಆದರೆ ಪ್ರದರ್ಶನ ಕಲೆಗಳಾದ ಗಾಯನ, ನೃತ್ಯ ಮುಂತಾದವನ್ನು ಪ್ರದರ್ಶಿಸುವುದಕ್ಕೂ ವಿಶೇಷ ಕೌಶಲ್ಯ ಮತ್ತು ಬುದ್ಧಿವಂತಿಕೆ ಬೇಕು. ಅದು ದೇವರು ಕೊಟ್ಟ ವರ. ಅದನ್ನು ಉತ್ಸಾಹದಿಂದ ಮುಂದುವರೆಸಿಕೊಂಡು ಹೋಗಬೇಕು. ನಿಮ್ಮ ಮುಂದಿನ ಸಾಧನೆಯು ನಿಮ್ಮ ಸ್ನೇಹಿತರು, ಪೋಷಕರು, ಕಾಲೇಜಿಗೆ ಹೆಮ್ಮೆಯ ವಿಷಯವಾಗುತ್ತದೆ ಎಂದರು.
ಸಂಗೀತ ಮತ್ತು ಪ್ರದರ್ಶಕ ಕಲೆಯು ನಾವೆಲ್ಲರೂ ಒಂದೇ ಎಂಬುದನ್ನು ಕಲಿಸುತ್ತದೆ. ನಾವೆಲ್ಲ ರಾಷ್ಟ್ರಕ್ಕಾಗಿ ದುಡಿಯೋಣ ಎಂಬುದನ್ನು ಹೇಳಿಕೊಡುತ್ತದೆ. ಇಂತಹ ಕಲೆಯನ್ನು ಸಮಾಜಕ್ಕೆ ಮತ್ತಷ್ಟು ಯಶಸ್ವಿಯಾಗಿ ತಲುಪಿಸಬೇಕು. ಈ ಜವಾಬ್ದಾರಿ ನಿಮ್ಮೆಲ್ಲರ ಮೇಲೂ ಇದೆ. ನೀವು ಕಲಿತಿರುವುದನ್ನು ಗೌರವ ಪೂರ್ವಕವಾಗಿ ತೆಗೆದುಕೊಂಡು ನಿಮ್ಮ ವಿದ್ಯೆಗೆ ಕೊನೆಯ ಉಸಿರು ಇರುವತನಕ ನಿಷ್ಠೆಯಿಂದ ನಡೆದುಕೊಳ್ಳಬೇಕು. ರಾಷ್ಟ್ರದ ಹಿತಕ್ಕಾಗಿ ಜೀವನವನ್ನು ಮುಡಿಪಾಗಿ ಇಡಬೇಕು ಎಂದರು.ಯಾವ ರಾಷ್ಟ್ರಗಳಲ್ಲಿ ಒಂದು ಕಲೆ, ಸಾಹಿತ್ಯ, ಸಂಸ್ಕೃತಿಗೆ ಗೌರವ ಸಿಗುತ್ತದೆಯೋ ನಿಸಂದೇಹವಾಗಿ ಆ ರಾಷ್ಟ್ರದ, ಪ್ರಾಂತ್ಯದ ವೈಭವ, ಗೌರವ ಸಾಮಾಜಿಕ ಸ್ವಾಸ್ಥ್ಯವು ಬೆಳಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಯಾವುದೇ ನಾಗರೀಕತೆಯನ್ನು ನೋಡಿದಾಗ ಅಲ್ಲಿ ಎಷ್ಟು ಬಂಗಾರ ಇತ್ತು ಎಂಬುದಕ್ಕಿಂತ ಎಂತೆಂಥ ಗಾಯಕರು, ವಿದ್ವಂಸರು ಇದ್ದರು ಎಂಬುದನ್ನು ತಿಳಿಉವ ಸಾಂಸ್ಕೃತಿಕವಾಗಿ ಪ್ರಬುದ್ಧವಾದ ಮನಸ್ಥಿತಿ ಕೆಲಸ ಮಾಡುತ್ತದೆ ಎಂದು ಅವರು ತಿಳಿಸಿದರು.
ಪ್ರತಿ ವರ್ಷವೂ ಎಸ್ಸೆಸ್ಸೆಲ್ಸಿಯಲ್ಲಿ ಇಷ್ಟನೇ ರ್ಯಾಂಕ್, ಅಷ್ಟು ರ್ಯಾಂಕ್ ಎಂದೆಲ್ಲ ಹೇಳಿಕೊಳ್ಳುತ್ತೇವೆ. ಅಂತೆಯೇ ಪಿಯುಸಿಯಲ್ಲಿ, ಸಿಇಟಿಯಲ್ಲಿ ಇಷ್ಟು ರ್ಯಾಂಕ್ ಪಡೆದರು ಎಂಬುದನ್ನು ಕೇಳಿದ್ದೇವೆ. ನಮ್ಮ ರಾಜ್ಯದಲ್ಲಿ ಬಹಳಷ್ಟು ವರ್ಷಗಳಿಂದ ಸಂಗೀತ, ನೃತ್ಯ ಪರೀಕ್ಷೆ ನಡೆಸಿಕೊಂಡು ಬಂದಿದ್ದೆವು. ಈಗ ಅದನ್ನು ವಿಶ್ವವಿದ್ಯಾನಿಲಯ ನಡೆಸುತ್ತಿದ್ದು, ಅದಕ್ಕೆ ಘಟಿಕೋತ್ಸವ ಎಂಬ ವೈಭವ ಇದೆ. ವಿದ್ಯಾರ್ಥಿಗಳಲ್ಲಿ ಹುರುಪು ಹೆಚ್ಚಾಗಿದೆ ಎಂದು ಅವರು ತಿಳಿಸಿದರು.ವಿವಿಯಲ್ಲಿ ಈ ಬಾರಿ 12 ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ ಪರೀಕ್ಷೆ ನಡೆಸಲಾಗಿದೆ. ಇದು ಸಾಮಾನ್ಯ ಸಂಗತಿ ಅಲ್ಲ. ಥಿಯರಿ, ಪ್ರಾಕ್ಟಿಕಲ್, ಮುಂತಾದ ನೂರೆಂಟು ಪರೀಕ್ಷೆ ಬೇಕಾಗುತ್ತದೆ. ರ್ಯಾಂಕ್ ಬಂದಿರುವವರಿಗೆ ಪ್ರಮಾಣ ಪತ್ರವನ್ನು ಕೊಡುವ ಕೆಲಸ ಮಾಡಲಾಗುತ್ತಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಮೊದಲ ರ್ಯಾಂಕ್ ವಿವಿಗೆ ಸೇರಬೇಕು ಎಂದರು.
ವಿವಿಯನ್ನು ಮಾಮೂಲಿ ರೀತಿ ನಡೆಸುವುದೇ ಕಷ್ಟವಿರುವಾಗ, ಪ್ರದರ್ಶಕ ಕಲೆಗಳಿಗೆ ಮೀಸಲಿರುವ ವಿವಿ ನಡೆಸುವುದು ಸಾಧಾರಣ ಕೆಲಸವಲ್ಲ. ಅದೊಂದು ದೊಡ್ಡ ತಲೆ ನೋವು. ಜನರಿಗೆ ಮತ್ತು ಸಾಮಾಜಕ್ಕೆ ಸ್ವಾಸ್ಥ್ಯ ಕೊಡಲು ಜವಾಬ್ದಾರಿಯುತ ಸಮೂಹ ಇದು. ನಾಗೇಶ್ ಬೆಟ್ಟಕೋಟೆ ಅವರು ಬಂದ ಮೇಲೆ ಹೇಗೆ ವಿವಿಯು ಮೇಲ್ಮುಖವಾಗಿ ಚಲಿಸುತ್ತಿದೆ ಎಂಬುದು ಎಲ್ಲರೂ ಕಂಡಿದ್ದಾರೆ. ಮಕ್ಕಳಲ್ಲಿ ಸಾಮಾನ್ಯ ತರಗತಿ ಪರೀಕ್ಷೆ, ಟ್ಯೂಷನ್ ಜತಗೆ ಪ್ರದರ್ಶಕ ಕಲೆಗಳನ್ನು ಕಲಿಸುತ್ತಿರುವ ಪೋಷಕರ ಶ್ರಮವನ್ನು ಮೆಚ್ಚಬೇಕು ಎಂದು ಅವರು ಹೇಳಿದರು.ಸಂಗೀತ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ವಿವಿಯು ಕಾಯಂ ನೌಕರರು ಮತ್ತು ಸಿಬ್ಬಂದಿ ಕೊರತೆಯ ನಡುವೆಯೂ ಔಟ್ ಲುಕ್ ನ ಸಮೀಕ್ಷೆಯಂತೆ ವಿವಿ 7ನೇ ರ್ಯಾಂಕ್‌ಪಡೆದಿದೆ. ಹಸಿರು ಕ್ಯಾಂಪಸ್ ಸಮೀಕ್ಷೆಯಲ್ಲಿ 3ನೇ ಸ್ಥಾನ ಪಡೆದಿದೆ ಎಂದರು.
ಪ್ರಖ್ಯಾತ ನಾಟಕಕಾರರು, ಸಾಹಿತಿಗಳು, ಜನಪದ ವಿದ್ವಾಂಸರು ಇಲ್ಲಿ ಡಿಲಿಟ್ ಮಾಡುತ್ತಿದ್ದಾರೆ. ರಾಜ್ಯದಾದ್ಯಂತ ಒಟ್ಟು 84 ಸಂಸ್ಥೆಗಳೊಡನೆ ಒಪ್ಪಂದ ಮಾಡಿಕೊಂಡಿದ್ದೇವೆ. ಹೊರ ರಾಜ್ಯಗಳಿಂದಲೂ ಎಂವೈಯುಗೆ ಬೇಡಿಕೆ ಬಂದಿದೆ. ಆದರೆ ಯುಜಿಸಿ ನಿಯಮಾವಳಿಯಂತೆ ಹೊರ ರಾಜ್ಯದೊಡನೆ ಒಪ್ಪಂದ ಮಾಡಿಕೊಳ್ಳುವಂತಿಲ್ಲ. ಈ ತಿಂಗಳ ಅಂತ್ಯಕ್ಕೆ ಮತ್ತಷ್ಟು ಸಂಗೀತ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.ನಮ್ಮ ನಾಡು, ರಾಷ್ಟ್ರದ ಬೆಳವಣಿಗೆ ಉನ್ನತ ಶಿಕ್ಷಣ, ಆರೋಗ್ಯ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ರಾಷ್ಟ್ರದ ಬೆಳವಣಿಗೆ ಸಾಧ್ಯವಾಗುತ್ತದೆ. ಸಂಗೀತ ವಿವಿಯಲ್ಲಿ ಶಿಕ್ಷಣ, ಆರೋಗ್ಯ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಭಾರತದಲ್ಲಿ ಕಲೆಗೆ ಪ್ರೋತ್ಸಾಹ ಸಿಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲೆ ಬೆಳವಣಿಗೆ ಆಗುತ್ತಿದೆ ಎಂದು ಅವರು ಹೇಳಿದರು.
67 ವರ್ಷದಿಂದ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ಮೂಲಕ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ 2 ವರ್ಷದಿಂದ ನಾವು ಪರೀಕ್ಷೆ ನಡೆಸಿ ಡಿಜಿಟಲ್ ಗೆ ಬಂದಿದ್ದೇವೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಸೆಪ್ಟಂಬರ್ ಅಂತ್ಯಕ್ಕೆ ಘಟಿಕೋತ್ಸವ ನಡೆಸಲಾಗುತ್ತಿದೆ ಎಂದರು.ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್ ಮತ್ತು ಪ್ರಭಾರ ಕುಲಸಚಿವೆ ಕೆ.ಎಸ್. ರೇಖಾ ಇದ್ದರು.