ಸಾರಾಂಶ
ಸಾರ್ವಜನಿಕರ ರಕ್ಷಣೆಗಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಪೊಲೀಸ್ ಹುತಾತ್ಮರನ್ನು ಒಂದು ದಿನ ಮಾತ್ರ ಸ್ಮರಿಸದೆ, ಪ್ರತೀ ದಿನ ನೆನೆಯುವಂತಾಗಬೇಕು.
ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಾರವಾರಸಾರ್ವಜನಿಕರ ರಕ್ಷಣೆಗಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಪೊಲೀಸ್ ಹುತಾತ್ಮರನ್ನು ಒಂದು ದಿನ ಮಾತ್ರ ಸ್ಮರಿಸದೆ, ಪ್ರತೀ ದಿನ ನೆನೆಯುವಂತಾಗಬೇಕು ಎಂದು ಪ್ರಭಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್. ಹೇಳಿದರು.
ಮಂಗಳವಾರ ಕಾರವಾರದ ಪೊಲೀಸ್ ಕವಾಯತು ಮೈದಾನದಲ್ಲಿ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ, ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ದೇಶದ ಹೊರಗಿನ ಬಾಹ್ಯ ಶಕ್ತಿಗಳಿಂದ ದೇಶವನ್ನು ಸೇನಾಪಡೆಗಳು ರಕ್ಷಿಸುತ್ತಿದ್ದು, ದೇಶದ ಆಂತರಿಕ ಭದ್ರತೆಯನ್ನು ಪೊಲೀಸ್ ಪಡೆ ನಿರಂತರವಾಗಿ ರಕ್ಷಿಸುತ್ತಿದ್ದು, ದೇಶದ ನಾಗರೀಕರು ಪೊಲೀಸರ ತ್ಯಾಗ ಬಲಿದಾನವನ್ನು ಪ್ರತಿದಿನ ನೆನೆಯಬೇಕು ಎಂದರು.
ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿದಂತೆ ದೇಶದಲ್ಲಿ ಒಟ್ಟು 191 ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾಗಿದ್ದು, ಈ ಎಲ್ಲಾ ಹುತಾತ್ಮರ ಹೆಸರುಗಳನ್ನು ವಾಚಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಈ ಎಲ್ಲಾ ಸಿಬ್ಬಂದಿಯ ಆತ್ಮಕ್ಕೆ ಗೌರವವನ್ನು ಸಲ್ಲಿಸುತ್ತಾ, ಅವರ ಕುಟುಂಬ ವರ್ಗಕ್ಕೆ ದು:ಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಜಗದೀಶ್, ಜಿಲ್ಲೆಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ನಿವೃತ್ತ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.