ಶಿಕ್ಷಣ, ಆರೋಗ್ಯ ಸೇವೆಗೆ ಹೆಚ್ಚು ಒತ್ತು ನೀಡುತ್ತಿರುವ ರಾಜ್ಯ ಒಕ್ಕಲಿಗರ ಸಂಘವು ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯಕ್ಕೆ ಶಕ್ತಿ ತುಂಬಬೇಕು. ತುಮಕೂರಿನಲ್ಲಿ ಸಂಘದಿಂದ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ಮಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಶಿಕ್ಷಣ, ಆರೋಗ್ಯ ಸೇವೆಗೆ ಹೆಚ್ಚು ಒತ್ತು ನೀಡುತ್ತಿರುವ ರಾಜ್ಯ ಒಕ್ಕಲಿಗರ ಸಂಘವು ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯಕ್ಕೆ ಶಕ್ತಿ ತುಂಬಬೇಕು. ತುಮಕೂರಿನಲ್ಲಿ ಸಂಘದಿಂದ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ಮಾಡಿದರು.ನಗರದ ಮೆಳೆಕೋಟೆಯ ರಾಜ್ಯ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದ 2 ಮತ್ತು 3ನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು. ಈ ಹಾಸ್ಟೆಲ್ ಪಕ್ಕದಲ್ಲಿ ಸಂಘದ ನಿವೇಶನವಿದೆ, ಸಾರ್ವಜನಿಕರ ಉಪಯೋಗಕ್ಕಾಗಿ ಆಸ್ಪತ್ರೆ ಸ್ಥಾಪನೆ ಮಾಡಬೇಕು. ಈ ಕಾರ್ಯ ಶೀಘ್ರವಾಗಿ ಆರಂಭಗೊಳ್ಳಲು ಒಕ್ಕಲಿಗರ ಸಂಘದ ಪದಾಧಿಕಾರಿಗಳು ನಿರ್ಧಾರ ಮಾಡಬೇಕು ಎಂದರು. ಸಮುದಾಯದ ಭವಿಷ್ಯಕ್ಕಾಗಿ ಒಕ್ಕಲಿಗರ ಸಂಘ ಆಸ್ತಿ ನಿರ್ಮಾಣ ಮಾಡಬೇಕು. ಸಂಘದಲ್ಲಿ ಸಾಕಷ್ಟು ಹಣವಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಎಂದು ತಿಳಿಸಿದ ನಿಶ್ಚಲಾನಂದನಾಥ ಸ್ವಾಮೀಜಿ, ದಾಬಸ್‌ಪೇಟೆ ಬಳಿ 100 ಎಕರೆ ಜಮೀನು ಖರೀದಿಸಿ ಅಲ್ಲಿ ವಿದ್ಯಾಸಂಸ್ಥೆಗಳನ್ನು ಆರಂಭ ಮಾಡಿ ಒಕ್ಕಲಿಗರ ಸಂಘದ ವಿಶ್ವವಿದ್ಯಾಲಯ ಸ್ಥಾಪಿಸುವ ಸಂಘದ ಉದ್ದೇಶ ಉತ್ತಮವಾಗಿದೆ. ಒಳ್ಳೆಯ ಕೆಲಸಗಳಿಗೆ ತಡ ಮಾಡಬಾರದು, ಅತಿ ಶೀಘ್ರವಾಗಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಕುಣಿಗಲ್ ಅರೇಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ಸಾಂಘಿಕ ಶಕ್ತಿ ನಿಜವಾದ ಸಮುದಾಯದ ಶಕ್ತಿ. ರಾಜಕೀಯ, ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳಲು ರಾಜ್ಯ ಒಕ್ಕಲಿಗರ ಸಂಘ ಆಗಿಂದಾಗ್ಯೆ ಸಮುದಾಯದ ಸಮಾವೇಶಗಳನ್ನು ಮಾಡಿ ಜಾಗೃತಿ ಮೂಡಿಸಬೇಕು. ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಅದಕ್ಕಾಗಿ ಒಕ್ಕಲಿಗರ ಸಂಘವು ವೈದ್ಯಕೀಯ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಬೇಕು ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘ ಸಮುದ್ರವಿದ್ದಂತೆ, ಆರ್ಥಿಕವಾಗಿಯೂ ಸದೃಢವಾಗಿದೆ. ಸಂಘದಿಂದ ಸಮುದಾಯಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಬದ್ಧತೆಯಿಂದ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಸಲುವಾಗಿ ಅಗತ್ಯವಿರುವ ಕಡೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಇಲ್ಲಿ ಆಸ್ಪತ್ರೆ ಸ್ಥಾಪನೆಗೂ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದರು. ಸಂಘದ ನಿರ್ದೇಶಕರು, ಭೂ ಖರೀದಿ ಸಮಿತಿ ಅಧ್ಯಕ್ಷರೂ ಆದ ಆರ್. ಹನುಮಂತರಾಯಪ್ಪ ಮಾತನಾಡಿ, ಈ ವಿದ್ಯಾರ್ಥಿ ನಿಲಯಕ್ಕೆ ಬೇಡಿಕೆ ಹೆಚ್ಚಾಗಿದೆ. ಹೆಣ್ಣುಮಕ್ಕಳಿಗೆ ಸ್ಥಳಾವಕಾಶವಿಲ್ಲದೆ ಸಮಸ್ಯೆಯಾಗಿದೆ. ಸುಮಾರು ಆರು ಕೋಟಿ ರು. ವೆಚ್ಚದಲ್ಲಿ ಹೆಚ್ಚುವರಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿ ಸುಮಾರು 200 ವಿದ್ಯಾರ್ಥಿನಿಯರಿಗೆ ಸ್ಥಳಾವಕಾಶ ಮಾಡಿಕೊಡಲಾಗುವುದು. ಆರು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಅಧ್ಯಕ್ಷ ಲೋಕೇಶ್ ನಾಗರಾಜಯ್ಯ ಸಂಘದ ಗೌರವಾಧ್ಯಕ್ಷ ಬಿ. ಕೆಂಚಪ್ಪಗೌಡ ಮಾತನಾಡಿದರು. ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಗಂಗಾಧರ್, ಹಾಸ್ಟೆಲ್ ಸಮಿತಿ ಅಧ್ಯಕ್ಷ ವೆಂಕಟರಾಮೇಗೌಡ, ನಗರಪಾಲಿಕೆ ಮಾಜಿ ಉಪಮೇಯರ್ ಟಿ.ಆರ್.ನಾಗರಾಜು, ಮಾಜಿ ಸದಸ್ಯರಾದ ಧರಣೇಂದ್ರಕುಮಾರ್, ಶ್ರೀನಿವಾಸ್, ಮನೋಹರಗೌಡ, ಟೂಡಾ ಮಾಜಿ ಅಧ್ಯಕ್ಷ ದೇವೇಗೌಡ, ವಿವಿಧ ಸಂಘಸಂಸ್ಥೆಗಳ ಮುಖಂಡರಾದ ಲಕ್ಕೇಗೌಡ, ಭೈರವ ಗಿರೀಶ್, ಮಂಜುನಾಥ್, ನಟೇಶ್, ಜಯಮ್ಮ, ನಾಗಮಣಿ ಕಾಮೇಶ್, ಪುಟ್ಟಸ್ವಾಮಿ, ರಂಗಪ್ಪ, ನರಸಿಂಹಮೂರ್ತಿ, ಉಪ್ಪಾರಹಳ್ಳಿ ಕುಮಾರ್, ಪ್ರೊ.ವೀರಯ್ಯ, ಮುನಿಸ್ವಾಮಿಗೌಡ, ಲೀಲಾವತಿ, ಮಂಜುಳಾ ಮೊದಲಾದವರು ಭಾಗವಹಿಸಿದ್ದರು.