ನಮ್ಮ ಮನೆಗಳಲ್ಲು ಓಬವ್ವಳಂತ ಶಕ್ತಿ ಬೆಳೆಯಲಿ

| Published : Nov 12 2025, 03:15 AM IST

ನಮ್ಮ ಮನೆಗಳಲ್ಲು ಓಬವ್ವಳಂತ ಶಕ್ತಿ ಬೆಳೆಯಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಓಬವ್ವಳ ಜನ್ಮ ದಿನದಲ್ಲಿ ಕೇವಲ ಹಾರ ಹಾಕಿ ಪೂಜೆ ಮಾಡಿ ಭಾಷಣಗಳನ್ನು ಕೇಳಿದರೆ ಸಾಲದು, ನಮ್ಮ ಮನೆಯಲ್ಲು‌ ಸಹ ಅವಳಂತೆ ಸಾಹಸದ ಸ್ತ್ರೀ ಶಕ್ತಿ ಬೆಳೆಯುವ ಹಾಗೆ ಮಾಡಬೇಕು. ಶೋಷಣೆಗಳನ್ನು ಎದುರಿಸುವ ಶಕ್ತಿ ಮಹಿಳೆಯರಲ್ಲಿ ಬರಬೇಕು. ಅಂದಾಗ ಜಯಂತಿ ಮಾಡಿದ್ದು ಅರ್ಥಪೂರ್ಣವಾಗುತ್ತದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆ.ಎಮ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಓಬವ್ವಳ ಜನ್ಮ ದಿನದಲ್ಲಿ ಕೇವಲ ಹಾರ ಹಾಕಿ ಪೂಜೆ ಮಾಡಿ ಭಾಷಣಗಳನ್ನು ಕೇಳಿದರೆ ಸಾಲದು, ನಮ್ಮ ಮನೆಯಲ್ಲು‌ ಸಹ ಅವಳಂತೆ ಸಾಹಸದ ಸ್ತ್ರೀ ಶಕ್ತಿ ಬೆಳೆಯುವ ಹಾಗೆ ಮಾಡಬೇಕು. ಶೋಷಣೆಗಳನ್ನು ಎದುರಿಸುವ ಶಕ್ತಿ ಮಹಿಳೆಯರಲ್ಲಿ ಬರಬೇಕು. ಅಂದಾಗ ಜಯಂತಿ ಮಾಡಿದ್ದು ಅರ್ಥಪೂರ್ಣವಾಗುತ್ತದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆ.ಎಮ್ ಹೇಳಿದರು.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರ ಹಲವಾರು ಮಹಾನ ಚೇತನಗಳ ಜಯಂತಿಗಳನ್ನು ಆಚರಿಸುವ ಮೂಲಕ ಮುಖ್ಯವಾಹಿನಿಗೆ ತಂದಿದೆ. ಪ್ರಸ್ತುತ ಅಂತಹ ಮಹಾನ ಚೇತನರ ಜೀವನ, ತತ್ವಗಳನ್ನು ಇಂದಿನ ಯುವ ಜನತೆ ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು. ಒಬ್ಬ ಮಹಿಳೆ ಸಾಮಾನ್ಯ ಗೃಹಿಣಿಯಾಗಿದ್ದುಕೊಂಡು ತನ್ನ ಧೈರ್ಯ ಮತ್ತು ನಿಷ್ಠೆಯಿಂದ ಯಾವ ರೀತಿ ಕೋಟೆಯನ್ನು ರಕ್ಷಿಸುತ್ತಾಳೆ ಎಂಬುದನ್ನು ಒನಕೆ ಓಬವ್ವಳ ಚರಿತ್ರೆಯಿಂದ ನೋಡಬಹುದು. ಇದು 350 ವರ್ಷಗಳ ಹಿಂದೆ ನಡೆದ ಘಟನೆಯಾಗಿದ್ದು, ಈಗಲು ಪ್ರಸ್ತುತ. ಈ ಇತಿಹಾಸ ನಮ್ಮ ಮನೆ ಮನಗಳಲ್ಲಿಯೂ ಇದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆನೆನ್‌ ಸ್ಮಿತ್ ಕಾಲೇಜು ಉಪನ್ಯಾಸಕರಾದ ಡಾ.ಬಿ.ಆರ್.ರಾಧಾ ಮಾತನಾಡಿ, ಅಂಬೇಡ್ಕರ್ ಅವರು ಹೇಳಿದ ಮಾತಿನಂತೆ ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಹಾಗೆ ನಮ್ಮ ಪೂರ್ವಜರ ಇತಿಹಾಸಗಳನ್ನು ತಿಳಿದು ಅವರು ತೋರಿಸಿದ ದಾರಿಯಲ್ಲಿ ನಡೆಯಬೇಕು ಎಂದರು.

ಸಾಮಾನ್ಯ ಗೃಹಿಣೆಯಾಗಿದ್ದವಳ ಮಾಡಿದ ಸಾಹಸದಿಂದಾಗಿ ನಮ್ಮ ನಾಡಿನ ಸಾಂಸ್ಕೃತಿಕ ನಾಯಕಿ ಓಬವ್ವ. ಚಿತ್ರದುರ್ಗದ ರಕ್ಷಣೆ ಮಾಡುವಲ್ಲಿ ಮಹತ್ವ ಪಾತ್ರ ಓಬವ್ವಳದ್ದು, ಹೈದಾರಲಿ ಕುತಂತ್ರದಿಂದ ಕೋಟೆ ವಶ ಪಡಿಸಿಕೊಳ್ಳಲು ಪ್ರಯತ್ನ ಮಾಡಿದ ಸಂದರ್ಭದಲ್ಲಿ ಕೋಟೆ ಒಳಗಡೆ ನುಸುಳುತ್ತಿದ್ದಂತಹ ಶತ್ರುಗಳನ್ನು ನೋಡಿ ತಡಮಾಡದೆ ತನ್ನ ನಾಡಿನ ಉಳಿವಿಗಾಗಿ ತನ್ನ ಒನಕೆಯಿಂದ ಶತ್ರುಗಳನ್ನು ಹೊಡೆದು ನಾಡನ್ನು ರಕ್ಷಣೆ ಮಾಡಿದ್ದು ನಮ್ಮೆಲರಿಗೂ ಒಂದು ಸ್ಪೂರ್ತಿಯಾಗಿದೆ ಎಂದು ಸ್ಮರಿಸಿದರು.ಭಾರತದ ಇತಿಹಾಸ ಮಾತ್ರವಲ್ಲಾ ವಿಶ್ವದ ಇತಿಹಾಸದಲ್ಲಿ ಗುರುತಿಸಿಕೊಂಡ ಮಹಾನ ಸಾಹಸ ಒನಕೆ‌ ಓಬವ್ವಳದ್ದು, ಅವಳ ನೆನಪು ಜನ ಮಾನಸದಲ್ಲಿ ಅಚ್ಚಳಿಯದೆ ಇತಿಹಾಸದಲ್ಲಿ ಉಳಿದಿದೆ. ಓಬವ್ವಳ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ಅವಳ ಶೌರ್ಯ, ಧೈರ್ಯ ಮತ್ತು ಸಾಹಸಗಳ ಬಗ್ಗೆ ವಿಚಾರ ಸಂಕೀರ್ಣಗಳು ನಡೆಯಬೇಕು. ಅಂದಾಗ ಸಂಪೂರ್ಣವಾಗಿ ಇತಿಹಾಸ ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಚಣ್ಣೂರ, ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಪಂಚಾಯತಿ ಸಹಾಯಕ ಕಾರ್ಯದರ್ಶಿ ರಾಹುಲ‌ ಕಾಂಬಳೆ, ಸಮಾಜದ ಮುಖಂಡರಾದ ಮಲ್ಲೇಶ ಚೌಗಲೆ, ಮಲ್ಲಿಕಾರ್ಜುನ ರಾಶಿಂಗೆ, ದುರ್ಗೇಶ ಮೇತ್ರಿ, ಮಹದೇವ ತಳವಾರ ಸೇರಿದಂತೆ ಸಮಾಜದ ಗಣ್ಯ ಮಾನ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.