ಪಿಡಿಒಗಳ ಸಮಸ್ಯೆಗಳಿಗೆ ಮುಕ್ತಿ ಸಿಗಲಿ

| Published : Oct 21 2025, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ದಶಕದಿಂದ ಎದುರಿಸುತ್ತಿರುವ ಹತ್ತಾರು ಸಮಸ್ಯೆ ಮತ್ತು ಸವಾಲುಗಳಿಗೆ ಇಂದಿಗೂ ಮುಕ್ತಿ ಸಿಗುತ್ತಿಲ್ಲ ಎಂದು ರಾಜ್ಯ ಪಿಡಿಒ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ರಾಜ್ಯಾಧ್ಯಕ್ಷ, ಮಸೂತಿ ಪಿಡಿಒ ರಮೇಶ ನಡಗೇರಿ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ದಶಕದಿಂದ ಎದುರಿಸುತ್ತಿರುವ ಹತ್ತಾರು ಸಮಸ್ಯೆ ಮತ್ತು ಸವಾಲುಗಳಿಗೆ ಇಂದಿಗೂ ಮುಕ್ತಿ ಸಿಗುತ್ತಿಲ್ಲ ಎಂದು ರಾಜ್ಯ ಪಿಡಿಒ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ರಾಜ್ಯಾಧ್ಯಕ್ಷ, ಮಸೂತಿ ಪಿಡಿಒ ರಮೇಶ ನಡಗೇರಿ ಬೇಸರ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ರಾಜ್ಯ ಪಿಡಿಒ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ನೇತೃತ್ವದಲ್ಲಿ ನಡೆದ ಜಿಲ್ಲೆಯ ಪಿಡಿಒಗಳ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ರಾಜ್ಯದಲ್ಲಿರುವ 6121 ಗ್ರಾಮ ಪಂಚಾಯತಿಗಳಲ್ಲಿ 5960 ಜನ ಪಿಡಿಒಗಳಿದ್ದಾರೆ. ಈ ಪೈಕಿ ಕೇವಲ 1500 ಪಿಡಿಒಗಳಿಗೆ ಮಾತ್ರ ಬಿ ಗ್ರೇಡ್ ಹುದ್ದೆ ಕಲ್ಪಿಸಿದ್ದು, ಬಾಕಿ 4460 ಪಿಡಿಒಗಳು 15 ವರ್ಷ ಕಳೆದರೂ ಬಡ್ತಿ ಪಡೆಯಲಾಗಿಲ್ಲ. ಹಾಗಾಗಿ ವೈದ್ಯಾಧಿಕಾರಿಗಳಿಗಿರುವ ಮಾನದಂಡವನ್ನು ಸರ್ಕಾರ ಕೂಡಲೇ ನಮ್ಮ ಪಿಡಿಒಗಳಿಗೂ ಅನ್ವಯವಾಗುವಂತೆ ಮಾಡಬೇಕು. ಬಡ್ತಿ ವಂಚಿತ ಪಿಡಿಒಗಳನ್ನು ತುರ್ತು ಜೇಷ್ಠತಾ ಪಟ್ಟಿಗೆ ಸೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಬಸನಗೌಡ ಚೌದ್ರಿ ಮಾತನಾಡಿ, ಪಿಡಿಒಗಳು ಈಗಾಗಲೇ ಬೇಸಿಕ್ ರೀಚ್ ಆಗಿದ್ದು, ಹೀಗಾಗಿ ಅವರಿಗೆ ಬಡ್ತಿ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಎದುರಾಗಲಾರದು ಎಂದರು.

ರಾಜ್ಯ ಉಪಾಧ್ಯಕ್ಷೆ ಶ್ರೀದೇವಿ ಮಡಿವಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ.ಡಿ, ರಾಜ್ಯ ನಿರ್ದೇಶಕಿ ರಾಜೇಶ್ವರಿ ಸಾಹು ಸೇರಿದಂತೆ ರಾಜ್ಯ, ಜಿಲ್ಲಾ ಪದಾಧಿಕಾರಿಗಳು ಹಾಗೂ ಪಿಡಿಒಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.