ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಎಲ್ಲ ವರ್ಗದವರಿಗೆ ತಲುಪಬೇಕು. ಆ ಮುಖಾಂತರ ಸಾಮಾಜಿಕ ನ್ಯಾಯ ಕೊಡಲು ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಅನುಷ್ಠಾನವೂ ಶೇ.100ರಷ್ಟು ಆಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎ. ಗದ್ದಿಗೇಶ್ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ವವ್ಯಾಪಿ, ಸರ್ವಸ್ಪರ್ಶಿಯಂತೆ ಈ ಯೋಜನೆಗಳು ಎಲ್ಲರಿಗೂ ತಲುಪಬೇಕು ಎಂಬುದೇ ನಮ್ಮ ಸರ್ಕಾರದ ಗುರಿ. ಅದಕ್ಕಾಗಿ ಸರ್ಕಾರಕ್ಕೆ ಎಷ್ಟೇ ಕಷ್ಟವಾದರೂ ಈ ಯೋಜನೆಗಳನ್ನು ಕೈ ಬಿಡದೇ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದರು.

ಸಿಡಿಪಿಒ ಜ್ಯೋತಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯಡಿ 33477 ಅರ್ಹ ಫಲಾನುಭವಿಗಳಿಗೆ ಮೇ ತಿಂಗಳವರೆಗೆ ₹208 ಕೋಟಿಯನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಅವರಲ್ಲಿ 61 ಅರ್ಹ ಫಲಾನುಭವಿಗಳು ಮರಣ ಹೊಂದಿದ್ದು, ಅವರ ಪಾಲಿನ ₹5.27 ಲಕ್ಷವನ್ನು ಬ್ಯಾಂಕಿನಿಂದ ವಾಪಸ್ ಪಡೆಯಲಾಗಿದೆ ಎಂದು ಸಭೆಗೆ ತಿಳಿಸಿದರು.

ತಾ.ಪಂ. ಇ.ಒ. ಧರಣೇಶ್ ಮಾತನಾಡಿ, ಯುವನಿಧಿ ಯೋಜನೆಯಡಿ ಪದವಿಯ 1140 ಹಾಗೂ ಡಿಪ್ಲೊಮಾದ 23 ಸೇರಿದಂತೆ ಒಟ್ಟು 1163 ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯಡಿ ₹3.62 ಕೋಟಿ ವಿತರಿಸಲಾಗಿದೆ. ಶಕ್ತಿ ಯೋಜನೆಯಡಿ ಈಗಾಗಲೇ ಮರುನೋಂದಣಿ ಶೇ.84ರಷ್ಟು ಮುಗಿದಿದೆ. ಇನ್ನೂ ಶೇ.16ರಷ್ಟು ಮುಗಿಯಬೇಕಿದೆ. ಆ.15ರ ಒಳಗೆ ಮುಗಿಸುತ್ತೇವೆ. ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಯ 10 ಸಾವಿರ ಅರ್ಹ ಫಲಾನುಭವಿಗಳಿದ್ದು, ಅವರ ನೋಂದಣಿ ಕೂಡ ಆಗುತ್ತದೆ ಎಂದು ಹೇಳಿದರು.


ಬೆಸ್ಕಾಂ ಎಇಇ ಶ್ರೀನಿವಾಸ್ ಮಾತನಾಡಿ, ಸರ್ಕಾರದಿಂದ ಶಕ್ತಿ ಯೋಜನೆ ಹಣ ಬಿಡುಗಡೆಯಾಗಿದೆ. ಶಕ್ತಿ ಯೋಜನೆಯಡಿ ಸರ್ಕಾರದಿಂದ ಬರಬೇಕಿದ್ದ ₹1.59 ಕೋಟಿ ಇಲಾಖೆಗೆ ವರ್ಗಾಯಿಸಲಾಗಿದೆ ಎಂದರು.

ಕೆಎಸ್‌ಆರ್‌ಟಿಸಿ ಬಸ್ ಡಿಪೋ ವ್ಯವಸ್ಥಾಪಕ ರಾಮಚಂದ್ರಪ್ಪ ಮಾತನಾಡಿ, ಅವಳಿ ತಾಲೂಕಿನಲ್ಲಿ 1.55 ಕೋಟಿ ಮಹಿಳೆಯರು ಬಸ್ ಪ್ರಯಾಣ ಮಾಡಿದ್ದಾರೆ. ಅಂದರೆ ಶೇ.67ರಷ್ಟು ಮಹಿಳೆಯರು ಪ್ರಯಾಣಿಸಿದರೆ ಉಳಿದ ಶೇ.33ರಷ್ಟು ಮಾತ್ರ ಪುರುಷರು ಪ್ರಯಾಣ ಮಾಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಈ ನಡುವೆ ಗ್ಯಾರಂಟಿ ಯೋಜನೆ ಸದಸ್ಯ ಶೇಖರಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ಸಾಕಷ್ಟು ಬಸ್‌ಗಳ ಸೌಕರ್ಯ ಕಡಿಮೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಶೀಘ್ರ ಶಾಸಕರ ಗಮನಕ್ಕೆ ತಂದು ಹೆಚ್ಚುವರಿ ಬಸ್‌ಗಳನ್ನು ತಾಲೂಕಿಗೆ ತರಿಸುವಂತೆ ತಿಳಿಸಿದರು.

ಸಾಸ್ವೇಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಗ್ಯಾರಂಟಿ ಯೋಜನೆ ಸರ್ಕಾರದ ಭಾಗವಾಗಿದೆ. ಆದ್ದರಿಂದ ನಾವು ಸಹ ಸರ್ಕಾರದ ಭಾಗ ಆಗುತ್ತೇವೆ. ಆ.15ರಂದು ನಡೆಯುವ ಸಮಾರಂಭಗಳಿಗೆ ಗ್ರಾ.ಪಂ.ಮಟ್ಟದಲ್ಲಿ ನಮ್ಮನ್ನು ಕರೆಯುವಂತೆ ತಾವುಗಳು ಪಿಡಿಒಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಈ ಮನವಿಯನ್ನು ತಾಪಂ ಇಒ ಪುರಸ್ಕರಿಸಿದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಸದಸ್ಯ ಶಿವಮೂರ್ತಿ ಮಾತನಾಡಿ, ಸಮಾರಂಭದಲ್ಲಿ ನಮಗೆ ಸನ್ಮಾನಿಸಬೇಕು ಎಂದು ಪಿಡಿಒಗಳಿಗೆ ತಿಳಿಸುವಂತೆ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬ ಸದಸ್ಯ ಬೆನಕನಹಳ್ಳಿ ರಂಗಪ್ಪ ಮಾತನಾಡಿ, ನಮಗೆ ಸನ್ಮಾನಕ್ಕಿಂತ ಸಕಾಲದಲ್ಲಿ ಸಾರ್ವಜನಿಕರಿಗೆ ಇ-ಸ್ವತ್ತು ಸೌಲಭ್ಯ ಕೊಡಿ ಎಂದು ಮನವಿ ಮಾಡಿದರು. ಆಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಿದರು.

- - -

-1ಎಚ್.ಎಲ್.ಐ2:

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಿತಿ ಅಧ್ಯಕ್ಷ ಎಚ್.ಎ. ಗದ್ದಿಗೇಶ್ ಮಾತನಾಡಿದರು. ತಾಪಂ ಇಒ ಧರಣೇಶ್, ಸಮಿತಿ ಸದಸ್ಯರು ಇದ್ದರು.