ಸಾರಾಂಶ
3.61ಕೋಟಿ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ, 31.16ಲಕ್ಷ ವೆಚ್ಚದ ಕಾಮಗಾರಿ ಲೋಕಾರ್ಪಣೆಕನ್ನಡಪ್ರಭ ವಾರ್ತೆ ಹಳಿಯಾಳ
ನನ್ನ ಮನೆಗೆ ಬಂದ ಯಾರಿಗೂ ನಾನು ಬರಿಗೈಯಲ್ಲಿ ಕಳಿಸದೇ ಅವರ ಕಷ್ಟ, ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಬಡವರ ಹಾಗೂ ಶೋಷಿತರ ಕಷ್ಟ ದೂರವಾಗಬೇಕೆಂಬುದು ನನ್ನ ಕಾಳಜಿಯಾಗಿದೆ. ಅದಕ್ಕಾಗಿ ಬಡವರಿಗೆ ಹಾಗೂ ವಸತಿರಹಿತರಿಗೆ ಮೀಸಲಾಗಿಟ್ಟ ಯೋಜನೆಯನ್ನು ಅರ್ಹ ಫಲಾನುಭವಗಳಿಗೆ ದೊರಕುವಂತೆ ಮಾಡಲು ಸಾರ್ವಜನಿಕರು ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿದರು.ಬುಧವಾರ ಸಂಜೆ ಹಳಿಯಾಳ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆಯ ಬಳಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ₹90 ಲಕ್ಷ ವೆಚ್ಚದ ರಸ್ತೆ ಸುಧಾರಣಾ ಕಾಮಗಾರಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ನನ್ನ ಒಳ್ಳೆಯನತದ ದುರುಪಯೋಗ ಪಡೆಯಲಾಗುತ್ತದೆ ಎಂಬ ವಿಚಾರವು ನನ್ನ ಗಮನಕ್ಕೆ ಬಂದಿದೆ. ಪ್ರತಿಯೊಂದು ಬೆಳವಣಿಗೆ ನನಗೆ ಗೊತ್ತಿರುತ್ತದೆ, ನಾನು ಮಾತುಗಾರನಲ್ಲ, ಕೆಲಸದಲ್ಲಿ ವಿಶ್ವಾಸವಿರಿಸಿ ಕೊಂಡವನು ನಾನು, ನನ್ನ ಕೆಲಸಗಳೇ ಮಾತನಾಡುತ್ತವೆ. ನನ್ನ ಜವಾಬ್ದಾರಿ ನಾನು ಮಾಡುತ್ತೇನೆ ಎಂದರು. ನಿಮ್ಮ ಆಶೀರ್ವಾದದ ಬಲದಿಂದಲೇ ರಾಜಕೀಯದಲ್ಲಿ ನಾನು ಈ ಹಂತಕ್ಕೆ ಬೆಳೆಯಲು ಸಾಧ್ಯವಾಯಿತು, ಅದಕ್ಕಾಗಿ ನಾನು ನಿಮಗೆ ಚಿರಋಣಿಯಾಗಿರುವೆನು ಎಂದರು. ಐವತ್ತು ವರ್ಷಗಳ ಹಿಂದೇ ಹಳಿಯಾಳ ಪಟ್ಟಣ ಹೇಗಿತ್ತು, ಈಗ ಹಳಿಯಾಳ ಹೇಗಿದೆ. ಈ ಅಭಿವೃದ್ಧಿಗೆ ಯಾರೂ ಕಾರಣರೂ, ಯಾರಿಂದ ಅಭಿವೃದ್ಧಿ ಸಾಧ್ಯ, ಯಾರು ಶಾಂತಿ ಪ್ರಿಯರು, ಸರ್ವರನ್ನು ಸಮಾನಾಗಿ ಗೌರವದಿಂದ ಯಾರು ಕಾಣುತ್ತಾರೆ ಎಂಬುವುದನ್ನು ಜನ ಗುರುತಿಸಬೇಕು ಎಂದರು.
ಹಳಿಯಾಳದತ್ತ ಎಲ್ಲರ ವಲಸೆ:ಹಳಿಯಾಳದಲ್ಲಿ ಮೂಲಭೂತ ಸೌಲಭ್ಯಗಳು ಲಭ್ಯವಿರುವುದರಿಂದ ಇಂದು ನಗರಪ್ರದೇಶಗಳಿಂದ ಬಂದು ಹಳಿಯಾಳಕ್ಕೆ ಬಂದು ನೆಲೆಸುವವರ ಪ್ರಮಾಣ ಸಂಖ್ಯೆಯು ಬೆಳೆಯಲಾರಂಭಿಸಿದೆ. ಅದರ ಪರಿಣಾಮ ಇಂದು ಹಳಿಯಾಳದಲ್ಲಿ ಜಮೀನಿಗೆ ಬಂಗಾರದ ಬೆಲೆ ಬಂದಿದೆ, ಹಳಿಯಾಳ ಪಟ್ಟಣ ಇಂದು ನಾಲ್ಕು ದಿಕ್ಕಿನಲ್ಲೂ ಬೆಳೆಯುತ್ತಿದ್ದು, ಈ ಬೆಳವಣಿಗೆಯನ್ನು ಗಮನದಲ್ಲಿಟ್ಟು ಕೊಂಡು ಕೈಗೊಳ್ಳಬೇಕಾಗಿದ್ದ ಅಭಿವೃದ್ಧಿ ಕಾಮಗಾರಿಗಳ ಸಲಹೆಗಳು ಇದ್ದರೇ ತಾವು ನನಗೆ ನೀಡಿ ಎಂದರು.
ಶಿಲಾನ್ಯಾಸ:ಲೋಕೋಪಯೋಗಿ ಇಲಾಖೆಯಿಂದ ಲಕ್ಷ್ಮಣ ಪ್ಯಾಲೇಸ್ ಹೊಟೇಲ್‌ದಿಂದ ತತ್ವಣಗಿಯವರೆಗೆ ರಸ್ತೆ ಸುಧಾರಣೆ-₹2.25ಕೋಟಿ, ಅಗ್ನಿಶಾಮಕ ಠಾಣೆಯಿಂದ ಅಲ್ಲೋಳ್ಳಿ ಕ್ರಾಸವರೆಗೆ ರಸ್ತೆ ಸುಧಾರಣೆ ₹90ಲಕ್ಷ, ಬಿ.ಕೆ.ಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ₹28.90ಲಕ್ಷ ವೆಚ್ಚದ ಪ್ರಯೋಗಾಲಯ ಮತ್ತು ತರಗತಿ ಕೊಠಡಿ ನಿರ್ಮಾಣ, ಬಿ.ಕೆ. ಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ₹17.70ಲಕ್ಷ ವೆಚ್ಚದ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೆರಿಸಿದರು.
ಲೋಕಾರ್ಪಣೆ:ಬಿ.ಕೆ ಹಳ್ಳಿಯಲ್ಲಿ ।16.16ಲಕ್ಷ ವೆಚ್ಚದ ಗ್ರಂಥಾಲಯ ಕಟ್ಟಡ ಹಾಗೂ ತತ್ವಣಗಿ ಗ್ರಾಪಂನಲ್ಲಿ ₹15 ಲಕ್ಷ ವೆಚ್ಚದ ನೂತನ ಸಭಾಭವನ ಲೋಕಾರ್ಪಣೆ ಮಾಡಿದರು.
ಹಳಿಯಾಳ ಪರಸಭೆಯ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸ್ಥಾಯಿ ಸಮಿತಿಯ ಚೇರಮನ್ ಅನಿಲ ಚವ್ಹಾನ, ಪುರಸಭೆಯ ಸದಸ್ಯರಾದ ಸುವರ್ಣ ಮಾದರ, ಶಮೀಮಬಾನು ಜಂಬೂವಾಲೆ, ಮುಖಂಡರಾದ ರಹೆಮಾನ ಜಂಬೂವಾಲೆ, ಅಶೋಕ ಮೇಟಿ, ಹಳ್ಯಾಳಕರ, ಗುತ್ತಿಗೆದಾರ ಬಾಬು ಕಾಮ್ರೇಕರ, ಲೋಕೋಪಯೋಗಿ ಇಲಾಖೆ ಎಇಇ ಎಸ್.ವಿ. ಅಥಣಿ, ಸಂಜು ನಾಯ್ಕ, ಜಿಪಂ ಎಇಇ ಸತೀಷ್ ಆರ್. ಹಾಗೂ ಇತರರು ಇದ್ದರು.;Resize=(128,128))
;Resize=(128,128))