ಮನಸ್ಸಿನ ಸಂಕಲ್ಪ-ವಿಕಲ್ಪ ಅಳಿಯಲಿ: ಬಸವೇಶ್ವರಿ ಮಾತಾಜಿ

| Published : Jul 15 2025, 11:45 PM IST

ಸಾರಾಂಶ

ಲಿಂಗಧಾರಣವಾದ ಬಳಿಕ ದೇಹವೇ ಅಂಗವೆನಿಸುವುದು. ಮನಸ್ಸಿನ ಸಂಕಲ್ಪ-ವಿಕಲ್ಪಗಳು ಅಳಿಯಬೇಕು. ಮನಸ್ಸಿನ ನೆಮ್ಮದಿಗೋಸ್ಕರ ಅನೇಕ ರಾಜಮಹಾರಾಜರು ತಮ್ಮ ಸಿರಿ ತೊರೆದು ಕಲ್ಯಾಣದ ಅನುಭವ ಮಂಟಪಕ್ಕೆ ಬಂದರು ಎಂದು ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.

ಮುಂಡರಗಿ: ಲಿಂಗಧಾರಣವಾದ ಬಳಿಕ ದೇಹವೇ ಅಂಗವೆನಿಸುವುದು. ಮನಸ್ಸಿನ ಸಂಕಲ್ಪ-ವಿಕಲ್ಪಗಳು ಅಳಿಯಬೇಕು. ಮನಸ್ಸಿನ ನೆಮ್ಮದಿಗೋಸ್ಕರ ಅನೇಕ ರಾಜಮಹಾರಾಜರು ತಮ್ಮ ಸಿರಿ ತೊರೆದು ಕಲ್ಯಾಣದ ಅನುಭವ ಮಂಟಪಕ್ಕೆ ಬಂದರು ಎಂದು ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.

ಅವರು ಸೋಮವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢಮಾಸದ ಅಂಗವಾಗಿ ಜರುಗುತ್ತಿರುವ ಶರಣ ಚರಿತಾಮೃತ ಪ್ರವಚನದಲ್ಲಿ ಮಾತನಾಡುತ್ತಿದ್ದರು. ಅಜ್ಞಾನದಲ್ಲಿ ಮುಳಗಿದವರು ಜ್ಞಾನದ ಬೆಳಕಿನಲ್ಲಿ ತಮ್ಮತನ ಕಂಡುಕೊಂಡರು. ಕುರುಹಿನಿಂದ ಅರಿವು ಪಡೆದರು. ಅರಿವಿಗೆ ಹಿರಿದು-ಕಿರಿದಿಲ್ಲ. ಕಲ್ಯಾಣವು ಪ್ರತ್ಯಕ್ಷವಾಗಿ ಕೈಲಾಸವಾಗಿ ಮೆರೆಯಿತು. ಜ್ಞಾನರತ್ನ ಅಲಂಕರಿಸಿದವನೆ ನಿಜವಾದ ಸಿರಿವಂತ. ಆ ಸುಜ್ಞಾನ ರತ್ನ ಸಂಪಾದಿಸುವುದೇ ಮಾನವನ ಗುರಿಯಾಗಿದೆ ಎಂದರು.

ಸುಖ-ಸಂಪತ್ತನ್ನು ತ್ಯಜಿಸಿ ಅನೇಕ ರಾಜ-ಮಹಾರಾಜರು ಬಸವಣ್ಣನವರ ಅನುಭವ ಮಂಟಪಕ್ಕೆ ಬಂದರು. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣ-ಶರಣೆಯರು ಅನುಭವ ಮಂಟಪದಲ್ಲಿ ಸಮ್ಮಿಳನಗೊಂಡು ತಾವು ಅನುಭವಿಸಿ ವಚನ ಸಾಹಿತ್ಯ ಈ ನಾಡಿಗೆ ನೀಡಿದರು. ಇಲ್ಲಿ ಜಾತಿ-ಕಟ್ಟಳೆಗಳು ಇರಲಿಲ್ಲ. ಎಲ್ಲರೂ ಶರಣ ಧರ್ಮದ ಮಾರ್ಗದಲ್ಲಿ ಇಷ್ಟಲಿಂಗ ಪೂಜಿಸುತ್ತಾ ಆಧ್ಯಾತ್ಮದತ್ತ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು ಎಂದರು.

ಲಿಂಗ ಭಕ್ತನು ಜಂಗಮ ಮನೆಗೆ ಬರಲೆಂದು ಲಿಂಗ ಪೂಜೆ ಮಾಡುತ್ತಾನೆ. ಲಿಂಗ ಪೂಜಿಸುವ ಕೈಗಳು ಕಾಯಕ ನಿರತವಾಗಿರಬೇಕು. ಜಂಗಮ ದಾಸೋಹಕ್ಕಾಗಿಯೇ ಕಾಯಕ. ಬೇಡದ ಮುನ್ನವೇ ದಾಸೋಹ ಮಾಡುವುದೇ ಭಕ್ತನ ಲಕ್ಷಣ. ಭಕ್ತನ ಚೈತನ್ಯದ ಚುಳುಕು ಲಿಂಗ. ಲಿಂಗದ ಪ್ರಾಣ ಜಂಗಮ. ಹೀಗಿರುವಾಗ ಲಿಂಗ-ಜಂಗಮರು ಬೇಡುವವರಲ್ಲ ಎಂದರು.