ಸಾರಾಂಶ
ಗಡಿನಾಡು ಪ್ರದೇಶದಿಂದ ರಾಜ್ಯಾದ್ಯಂತ ಸರ್ಕಾರಿ ಕನ್ನಡ ಶಾಲೆ ಮಕ್ಕಳಿಗೆ ಫಲಾಪೇಕ್ಷೆ ಬಯಸದೆ ಸಂಸ್ಥೆ ನೀಡುತ್ತಿರುವ ನೆರವು ಮಾದರಿಯಾಗಿದೆ. 2009ರಲ್ಲಿ ಆರಂಭವಾದ ಸಂಸ್ಥೆ ನಿರಂತರವಾಗಿ ಸಂಸ್ಕಾರದ ಜತೆ ಮಕ್ಕಳ ಶೈಕಣಿಕ ಬದುಕಿಗೆ ಆಸರೆಯಾಗಿರುವಂತೆ ಉಳ್ಳವರು ನೆರವಾಗಬೇಕು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಫಲಾಪೇಕ್ಷೆ ಇಲ್ಲದ ಬಡ ಮಕ್ಕಳ ಶೈಕ್ಷಣಿಕ ಪ್ರಗತಿ ಆಸರೆಯಾಗಿರುವ ಅವಿತರ ಸಂಸ್ಥೆ ಕಾರ್ಯಕ್ರಮಗಳು ನಿರಂತರವಾಗಿಲಿ ಎಂದು ಮೈಸೂರಿನ ನಾರಾಯಣಾನಂದ ಆಶ್ರಮದ ನಿತ್ಯಾನಂದಪುರಿ ಸ್ವಾಮೀಜಿ ಹೇಳಿದರು.ಮಾರ್ಗೋನಹಳ್ಳಿ ಗ್ರಾಮದಲ್ಲಿ ವಿವಿಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬೆಂಗಳೂರಿನ ಅವಿರತ ಪ್ರತಿಷ್ಠಾನ ಏರ್ಪಡಿಸಿದ್ದ ಉಚಿತ ನೋಟ್ ಪುಸ್ತಕ, ಪಠ್ಯಪರಿಕರ ವಿತರಿಸಿ ಮಾತನಾಡಿ, ಮೊಬೈಲ್‌ನಿಂದ ಸಮಾಜದಲ್ಲಿ ಕೆಟ್ಟ ಕೆಲಸ, ಸೋಮಾರಿತನ, ಮಾನವೀಯ ಮೌಲ್ಯ ಕುಸಿಯುತ್ತಿದೆ. ಮೊಬೈಲ್ ಚಾಳಿ ದೂರವಾಗಿಸುವ ಮೂಲಕ ಮಕ್ಕಳಲ್ಲಿ ಪುಸ್ತಕ, ಪತ್ರಿಕೆ ಓದುವ ಪರಿಸರ ಸೃಷ್ಟಿಸಬೇಕಿದೆ ಎಂದರು.
ಗಡಿನಾಡು ಪ್ರದೇಶದಿಂದ ರಾಜ್ಯಾದ್ಯಂತ ಸರ್ಕಾರಿ ಕನ್ನಡ ಶಾಲೆ ಮಕ್ಕಳಿಗೆ ಫಲಾಪೇಕ್ಷೆ ಬಯಸದೆ ಸಂಸ್ಥೆ ನೀಡುತ್ತಿರುವ ನೆರವು ಮಾದರಿಯಾಗಿದೆ. 2009ರಲ್ಲಿ ಆರಂಭವಾದ ಸಂಸ್ಥೆ ನಿರಂತರವಾಗಿ ಸಂಸ್ಕಾರದ ಜತೆ ಮಕ್ಕಳ ಶೈಕಣಿಕ ಬದುಕಿಗೆ ಆಸರೆಯಾಗಿರುವಂತೆ ಉಳ್ಳವರು ನೆರವಾಗಬೇಕು ಎಂದರು.ಕನ್ನಡದ ಶಾಲೆ, ಸರ್ಕಾರಿ ಶಾಲೆ ಉಳಿಯಲು ಪೋಷಕರು ಮುಂದಾಗಬೇಕಿದೆ. ಅವಿರತ ಸಂಸ್ಥೆ ಉತ್ಸಾಹಿ ಯುವ ಸಮೂಹ ಹೊಂದಿದೆ. ಇಂತಹ ಪ್ರೇರಣೆ ಗ್ರಾಮೀಣ ಪ್ರದೇಶದಲ್ಲಿಯೂ ಆಗಬೇಕಿದೆ. ನಿಮ್ಮೂರ ನಿಮ್ಮ ಶಾಲೆ ಉಳಿಯಲು ಇಂತಹ ಸಂಸ್ಥೆಯವರನ್ನು ಗೌರವಿಸುವ ಕೆಲಸ ಆಗಬೇಕಿದೆ ಎಂದು ಆಶಿಸಿದರು.
ಸಮಾಜ ತಿದ್ದುವ ಕೆಲಸಕ್ಕೆ ಗುರು ಬೇಕಿದೆ. ಮಕ್ಕಳಿಗೆ ಯೋಗ, ಧ್ಯಾನ, ಪ್ರಾಣಾಯಾಮ ನಿತ್ಯಪಾಠವಾಗಲು ಶಿಕ್ಷಕ ಸಮೂಹ ಮುಂದಾಗಲಿ. ಅಂಕದಷ್ಟೆ ಸಂಸ್ಕಾರ ಮುಖ್ಯವಿದೆ. ವೃದ್ಧರನ್ನು, ಹಿರಿಯರನ್ನು ಪೋಷಿಸುವ ಮನಸ್ಸು ದೂರವಾಗದಂತೆ ಮಕ್ಕಳಿಗೆ ನೀತಿ ಪಾಠ ರಚನಾತ್ಮಕವಾಗಿ ಇರಲಿ ಎಂದರು.ಅವಿರತ ಪ್ರತಿಷ್ಠಾನದ ಗುರುಪ್ರಸಾದ್ ಮಾತನಾಡಿ, ಸರಳ ಬದುಕು ಉತ್ತಮ ಆಲೋಚನೆ ಮೈಗೂಢಿಸಿಕೊಳ್ಳಬೇಕು. ಪ್ರಸಕ್ತ ಸಾಲಿನಲ್ಲಿ ರಾಜ್ಯದ 420 ಸರ್ಕಾರಿ ಶಾಲೆಯಲ್ಲಿ 2.6 ಲಕ್ಷ ನೋಟ್‌ಪುಸ್ತಕ ವಿತರಿಸಲಾಗಿದೆ ಎಂದರು.
ಈ ವೇಳೆ ಅವಿರತ ಸಂಸ್ಥೆ ಸುನಿಲ್, ಯುವರಾಜ್, ಸಿ.ಕೆ. ತಿಲಕ್, ಚಂದ್ರು, ಪದ್ಮ, ಶಿಕ್ಷಣ ಪ್ರೇಮಿ ಗದ್ದೆಹೊಸೂರು ಬಾಲಕೃಷ್ಣ, ಮುಖ್ಯಶಿಕ್ಷಕಿ ಸವಿತಾ, ಶಿಕ್ಷಕರಾದ ಕುಮಾರ್, ಮಹೇಂದ್ರ, ಜಯರಾಂ, ಜಯಪ್ಪ, ಭಾಗ್ಯಮ್ಮ, ರುಕ್ಮಿಣಿ ಕುಮಾರ್, ಮಹೇಂದ್ರ ಇದ್ದರು.