ಸದ್ಗುಣ, ಪುಣ್ಯ ಕಾರ್ಯಗಳೇ ಸಂಪತ್ತಾಗಲಿ: ಶಿವಯೋಗಿಶ್ವರ ಸ್ವಾಮೀಜಿ

| Published : Aug 19 2025, 01:00 AM IST

ಸದ್ಗುಣ, ಪುಣ್ಯ ಕಾರ್ಯಗಳೇ ಸಂಪತ್ತಾಗಲಿ: ಶಿವಯೋಗಿಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರಾವಣ ಮಾಸ ಒಳ್ಳೆಯದನ್ನು ಕೇಳಿ ಹೇಳಿ ನಮ್ಮ ಮನಸ್ಸಿಗೆ ಉತ್ತಮ ಸಂಸ್ಕಾರ ಪಡೆದುಕೊಳ್ಳುವ ಪುಣ್ಯ ಕಾಲ.

ಹಾನಗಲ್ಲ: ಸದ್ಗುಣ, ಪುಣ್ಯ ಕಾರ್ಯಗಳೇ ಸಂಪತ್ತಾಗಬೇಕಾದ ಪುಣ್ಯಭೂಮಿ ಭಾರತದಲ್ಲಿ ದುರಭ್ಯಾಸಗಳಿಗೆ ಸಮಾಜ ಬಲಿಯಾಗುತ್ತಿರುವುದೇ ಅತಿ ದೊಡ್ಡ ದುರಂತವಾಗಿ, ಬೆಚ್ಚಿ ಬೀಳುವಂತಹ ಸಮಾಜವಿರೋಧಿ ಘಟನೆಗಳು ಭಯ ಹುಟ್ಟಿಸುತ್ತಿವೆ ಎಂದು ಬಮ್ಮನಹಳ್ಳಿಯ ಗುರುಪಾದೇಶ್ವರ ವಿರಕ್ತಮಠದ ಶಿವಯೋಗಿಶ್ವರ ಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಬಮ್ಮನಹಳ್ಳಿಯ ಗುರುಪಾದೇಶ್ವರ ವಿರಕ್ತಮಠದಲ್ಲಿ ಎರಡನೆ ಬಾರಿಗೆ ಆಯೋಜಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಚನ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಶ್ರಾವಣ ಮಾಸ ಒಳ್ಳೆಯದನ್ನು ಕೇಳಿ ಹೇಳಿ ನಮ್ಮ ಮನಸ್ಸಿಗೆ ಉತ್ತಮ ಸಂಸ್ಕಾರ ಪಡೆದುಕೊಳ್ಳುವ ಪುಣ್ಯ ಕಾಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಶರಣರ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸುವ ಮೂಲಕ ಮಕ್ಕಳಿಗೆ ವಚನ ಸಂಸ್ಕಾರ ನೀಡುವ ಸತ್ಕಾರ್ಯವಾಗಿದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ವಚನಗಳ ಶುದ್ಧ ಪಾಠವಿದ್ದರೆ ಮಾತ್ರ ಸರಿಯಾದ ಅರ್ಥ ನೀಡಬಲ್ಲದು. ಶರಣರು ನಿತ್ಯ ನಮ್ಮೊಡನೆ ಇರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಿದ ವಚನಗಳೇ ಬಹು ಸಂಖ್ಯೆಯಲ್ಲಿವೆ. ಅವುಗಳನ್ನು ಅರ್ಥ ಮಾಡಿಕೊಳ್ಳಲು ಸಾಹಸ ಮಾಡಬೇಕಾದ ಅಗತ್ಯವಿಲ್ಲ. ಅತ್ಯಂತ ಸರಳವಾಗಿ ಅವುಗಳ ಅನುಭಾವವನ್ನು ನಮ್ಮದಾಗಿಸಿಕೊಳ್ಳಬಹುದು ಎಂದರು.

ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಅಸಮಾನತೆಯ ಅಂಧಕ್ಕಾರ ಬಿಡಿಸಿದ ಶರಣರು ಜಾತೀಯತೆಯ ಬೇಲಿಯನ್ನು ಕಿತ್ತೊಗೆದು, ಸಮಾಜಕ್ಕೆ ಅಂಟಿದ ಜಾಢ್ಯಗಳನ್ನು ಬಿಡಿಸಿದ ಸಮಾಜ ಸುಧಾರಕರು ಎಂದರು.

ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪೂರ, ಮಲ್ಲಿಕಾರ್ಜುನ ಹಳೇಮನಿ, ಸವಿತಾ ರಮೇಶ, ಪ್ರದೀಪ ನೆಲವಿಗಿ, ಚನ್ನಪ್ಪ ಅಂಗಡಿ, ಶಿವಪ್ರಕಾಶ ಬಳಿಗಾರ, ಮಲ್ಲಣ್ಣ ಹುಕ್ಕೇರಿ, ಲೋಕೇಶ ಹೊಳಲದ ಅತಿಥಿಗಳಾಗಿದ್ದರು. ಇಡೀ ದಿನ ನಡೆದ ವಚನ ಕಂಠ ಪಾಠ ಸ್ಪರ್ಧೆಯ ನಿರ್ಣಾಯಕರಾಗಿ ಪ್ರೊ. ಸಿದ್ದೇಶ್ವರ ಹುಣಸಿಕಟ್ಟಿ, ಜಿ.ಎಂ. ಅರಗೋಳ, ಡಾ. ಆನಂದ ಇಂದೂರ, ಎಸ್. ನಿರ್ಮಲಾ, ಶಕುಂತಲಾ ಕೋಣನವರ ಕಾರ್ಯ ನಿರ್ವಹಿಸಿದರು.

ವಿಜೇತರು: ಪ್ರೌಢಶಾಲಾ ವಿಭಾಗದಲ್ಲಿ ೧೨೬ ವಚನಗಳನ್ನು ಕಂಠಪಾಠದಿಂದ ಪ್ರಸ್ತುತಪಡಿಸಿದ ಫಿಜಾ ಅಂಜುಂ ಬುಕ್ಕಿಟಗಾರ ಪ್ರಥಮ, ಶ್ರೀಶಾ ಗ್ಯಾರಿ ದ್ವಿತೀಯ, ಅಂಜಲಿ ಚಕ್ರಸಾಲಿ ತೃತೀಯ, ಸುಕನ್ಯಾ ಪಾಟೀಲ ಸಮಾಧಾನಕರ ಬಹುಮಾನ ಪಡೆದರು. ಪ್ರಾಥಮಿಕ ವಿಭಾಗದಲ್ಲಿ ದರ್ಶಿನಿ ಯಳ್ಳೂರ ಪ್ರಥಮ, ಕೆ. ಅನ್ವಿತಾ ದ್ವಿತೀಯ, ಎಂ.ಕೆ. ಶ್ರಾವಣಿ ತೃತೀಯ, ನಮ್ರತಾ ಗುಡದಳ್ಳಿ ತೃತಿಯ ಬಹುಮಾನ ಪಡೆದರು.