ಸಾರಾಂಶ
ಮುಂಡರಗಿ: ವಿಶ್ವಕರ್ಮರು ಎಲ್ಲರನ್ನೂ ಪ್ರೀತಿಸುತ್ತಾರೆ, ವಿಶ್ವಕರ್ಮರನ್ನೂ ಎಲ್ಲರೂ ಪ್ರೀತಿಸುತ್ತಾರೆ. ಆದರೆ ಒಬ್ಬ ವಿಶ್ವಕರ್ಮ ಇನ್ನೊಬ್ಬ ವಿಶ್ವಕರ್ಮನನ್ನು ಪ್ರೀತಿಸದಿರುವುದು ವಿಷಾದದ ಸಂಗತಿ. ಮೊದಲು ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು ಎಂದು ಶಹಾಪುರದ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ತಿಳಿಸಿದರು.
ಸೋಮವಾರ ಪಟ್ಟಣದ ಅನ್ನದಾನೀಶ್ವರ ಕಲ್ಯಾಣಮಂಟಪದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕದಿಂದ ಜರುಗಿದ ವಿಶ್ವಕರ್ಮ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ನಾವು ವಿಶ್ವಕರ್ಮರು ಗೋಲಗುಮ್ಮಟ, ಶ್ರವಣಬೆಳಗೋಳ, ಅಜಂತಾ, ವೆಲ್ಲೂರ, ಸೋಮನಾಥಪುರ ಹೀಗೆ ಇಡೀ ಜಗತ್ತನ್ನೇ ಕಟ್ಟಿದ್ದೇವೆ. ಆದರೆ ನಮ್ಮನ್ನು ನಾವು ಕಟ್ಟಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಎಲ್ಲರೂ ಒಂದಾಗಬೇಕು ಎಂದರು.
ವಿಶ್ವಕರ್ಮರದು ಎಣ್ಣೆ, ಬತ್ತಿಯಿಂದ ದೀಪ ಹಚ್ಚುವ ಜಾತಿಯಲ್ಲ. ಕಲ್ಲು, ಕಟ್ಟಿಗೆ, ಮಣ್ಣಿನಂತಹ ಪಂಚಲೋಹಗಳಲ್ಲಿ ದೀಪ ಹಚ್ಚುವ ಜಾತಿ. ಹೀಗಾಗಿ ವಿಶ್ವಕರ್ಮರು ಹಚ್ಚಿದ ದೀಪ ಎಂದಿಗೂ ಆರುವುದಿಲ್ಲ ಎಂದು ವಿಜಯಪುರದ ಲಿಂ. ಸಿದ್ದೇಶ್ವರ ಸ್ವಾಮೀಜಿಯರು ಹೇಳುತ್ತಿದ್ದರು. ವಿಶ್ವಕರ್ಮ ಸೃಷ್ಟಿ ಮಾಡಿದ್ದು ಸೂರ್ಯಚಂದ್ರ ಇರುವವರೆಗೂ ಇರುತ್ತವೆ. ಹೀಗಾಗಿ ನಮ್ಮನ್ನು ನಾವು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಕೆಳಗಿದ್ದವರನ್ನು ಮೇಲೆತ್ತುವ ಕಾರ್ಯವನ್ನು ಮಾಡಬೇಕು. ಅಂದಾಗ ಜಯಂತಿಗೆ ನಿಜವಾದ ಅರ್ಥ ಬರುತ್ತದೆ ಎಂದರು.ಸಾನ್ನಿಧ್ಯ ವಹಿಸಿದ್ದ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ವಿಶ್ವವನ್ನು ನಿರ್ಮಾಣ ಮಾಡುವಲ್ಲಿ ವಿಶ್ವಕರ್ಮರ ಪಾತ್ರ ಮಹತ್ವದ್ದಾಗಿದೆ. ಸರ್ಕಾರ ಜಾತಿ ಭೂತ ಎಣಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಕಾರ್ಯವನ್ನು ಮಾಡಬೇಕು. ಪಿಎಂ ಮೋದಿಯವರು ವಿಶ್ವಕರ್ಮರಿಗೆ 18 ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದಾರೆ. ಸಮಾಜದವರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕೋಟುಮಚಗಿಯ ಎಸ್.ಐ. ಪತ್ತಾರ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿದರು. ಮೌನೇಶ್ವರ ಮಹಾಸ್ವಾಮಿ ಉಪಸ್ಥಿತರಿದ್ದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ರಾಘವೇಂದ್ರ ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಆನಂದಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಮಣ್ಣ ಕಮ್ಮಾರ, ನಾರಾಯಣಪ್ಪ ಇಲ್ಲೂರ, ಕರಬಸಪ್ಪ ಹಂಚಿನಾಳ, ದೇವೇಂದ್ರಪ್ಪ ಆಚಾರ್ಯ, ಹೇಮಗಿರೀಶ ಹಾವಿನಾಳ, ಎಂ.ಎಫ್. ಬನ್ನಿಕೊಪ್ಪ, ಆನೆದ ಕಮ್ಮಾರ, ಪೂಜಾ ಕಮ್ಮಾರ, ಮೌನೇಶ ಪತ್ತಾರ, ಮೌನೇಶ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಂಜುನಾಥ ಮುಧೋಳ ಕಾರ್ಯಕ್ರಮ ನಿರೂಪಿಸಿದರು.