ಸಾರಾಂಶ
ಭಾಲ್ಕಿ ಪಟ್ಟಣದ ಪುರಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗು ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿಸಲಾಯಿತು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಮಹಿಳೆಯರು ಸಾಧನೆಯ ಹಾದಿಯಲ್ಲಿ ಮುನ್ನಡೆದಾಗ ಪ್ರಗತಿ ಸಾಧ್ಯ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಭಿನಯ ಕುಲಕರ್ಣಿ ಅಭಿಪ್ರಾಯಪಟ್ಟರು.ಪಟ್ಟಣದ ಪುರಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗು ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದ ಮಹಿಳೆಯರು ನಾಲ್ಕು ಗೋಡೆಯ ಮಧ್ಯದಲ್ಲಿಯೇ ಕಾಲ ಕಳೆಯುತ್ತಿದ್ದರು. ಆದರೆ ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಇನ್ನೂ ಹೆಚ್ಚಿನ ಸಾಧನೆಯ ಹಾದಿಯಲ್ಲಿ ನಡೆದರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು.
ವಕೀಲರ ಸಂಘದ ಉಪಾಧ್ಯಕ್ಷ ಮಹೇಶ ಪರಸಣೆ ಮಾತನಾಡಿ, ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶಗಳಲ್ಲಿಯೂ ಪ್ರತಿವರ್ಷ ಬಾಲಕಿಯರದ್ದೇ ಮೇಲುಗೈ ಇರುತ್ತದೆ. ಇದರಿಂದ ಮಹಿಳೆಯರು ನಿಜವಾದ ಸಾಧನಾ ಮೂರ್ತಿಗಳಾಗಿದ್ದಾರೆ ಎಂದರು.ನ್ಯಾಯವಾದಿ ಆರತಿ ತಿವಾರಿ ಮಾತನಾಡಿ, ಮಹಿಳೆಯು ತ್ಯಾಗದ ಮೂರ್ತಿಯಾಗಿದ್ದಾಳೆ. ಕುಟುಂಬವನ್ನು ಪ್ರೀತಿಯಿಂದ ಮುನ್ನಡೆಸಿಕೊಂಡು ಹೋಗುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿನದ್ದಿದೆ ಎಂದು ಹೇಳಿದರು.
ಪಿಎಸ್‌ಐ ಯಶೋಧಾ ಕಟಕ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ ಎಂದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ ಬಾಳವಾಲೆ ಪ್ರಾಸ್ತಾವಿಕ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕ ಸತೀಶ ಸಂಗನ, ತಾ.ಪಂ. ಅಧೀಕ್ಷಕ ವಿನೋದ ರೆಡ್ಡಿ, ತಾಲೂಕು ವೈದ್ಯಾಧಿಕಾರಿ ಶರಣಪ್ಪ ಮುಡಬಿ ಮಹಿಳಾ ದಿನಾಚರಣೆಯ ಕುರಿತು ಮಾತನಾಡಿದರು.
ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಆರತಿ, ಸಹಾಯಕ ಪ್ರದೀಪಕುಮಾರ, ಪ್ರಕಾಶ, ವೀರೇಶ, ಶ್ರೀನಿವಾಸ.ಬಿ, ಆರತಿ ಧನರಾಜ, ಪ್ರದೀಪ ಉಪಸ್ಥಿತರಿದ್ದರು.